Davangere Lockup Death: ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಸಾವು: ಪೊಲೀಸ್ ಠಾಣೆಯ ಕಿಟಕಿ ವಾಹನದ ಗಾಜು ಪೀಸ್ ಪೀಸ್
ದಾವಣಗೆರೆ ಮೇ 25: ಒಸಿ(ಮಟ್ಕಾ) ಆಡಿಸುತ್ತಿದ್ದ ಎನ್ನುವ ಆರೋಪದಲ್ಲಿ ಬಂಧಿತನಾದ ಆರೋಪಿ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಮರಣಹೊಂದಿದ್ದಾನೆ. ಇದನ್ನು ಲಾಕಪ್ ಡೆತ್ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿದೆ.
ಹೌದು... ಶುಕ್ರವಾರ (ಮೇ 24) ಸಂಜೆ ಚನ್ನಗಿರಿ ಠಾಣೆಯ ಪೊಲೀಸರು ಟಿಪ್ಪು ನಗರ ನಿವಾಸಿ ಆದಿಲ್ (30) ಎಂಬಾತನನ್ನು ಬಂಧಿಸಿದ್ದರು. ಬಂಧಿಸಿ ಠಾಣೆಗೆ ಕರೆ ತಂದ ತಕ್ಷಣ ಆತ ಮೂರ್ಛೆ ಹೋಗಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆರೋಪಿ ಬದುಕುಳಿದಿಲ್ಲ ಎನ್ನುವುದು ಗೊತ್ತಾಗಿದೆ. ಇದರಿಂದಾಗಿ ಕೋಪಗೊಂಡ ಸುಮಾರು ನೂರು ಜನರಿದ್ದ ಉದ್ರಿಕ್ತ ಗುಂಪು ಪೊಲೀಸ್ ಠಾಣೆಯ ಮೇಲೆ ರಾತ್ರಿ ಏಕಾಏಕಿ ದಾಳಿ ಮಾಡಿದೆ.

ಆದಿಲ್ ನನ್ನು ಠಾಣೆಯಲ್ಲಿ ಕೊಲ್ಲಲಾಗಿದೆ. ಇದು ಲಾಕಪ್ ಡೆತ್. ಆದಿಲ್ ಸಾವಿಗೆ ಪೊಲೀಸರೇ ಕಾರಣ. ಆದಿಲ್ ಸಾವು ಸಹಜವಾಗಿದ್ದಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಠಾಣಿಗೆ ಕರೆದುಕೊಂಡು ಹೋಗುವ ಮುನ್ನ ಆರೋಪಿ ಆದಿಲ್ ಆರೋಗ್ಯವಾಗಿದ್ದನು ಎಂದು ಕುಟುಂಬ ವಾದಿಸಿದೆ.
ಅನಿರೀಕ್ಷಿತ ದಾಳಿಯಿಂದಾಗಿ ಏಳು ಪೊಲೀಸ್ ವಾಹನಗಳು ಹಾನಿಯಾಗಿವೆ. ಠಾಣೆಯ ಮುಂದಿದ್ದ ಧ್ವಜದ ಕಟ್ಟೆ ಸೇರಿದಂತೆ ಠಾಣೆಯ ಪೀಠೋಪಕರಣಗಳನ್ನು ದ್ವಂಸಗೊಳಿಸಲಾಗಿದೆ. ಉದ್ರಿಕ್ತರು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಹನ್ನೊಂದು ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಕಳೆದ ದಿನ ರಾತ್ರಿ ನಡೆದ ಘಟನೆಯ ದೃಶ್ಯಗಳು ಠಾಣೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಮಾತನಾಡಿದ ದಾವಣಗೆರೆ ಎಸ್‌್ಪಿ ಉಮಾ ಪ್ರಶಾಂತ್, 'ಆರೋಪಿ ಆದಿಲ್ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೇಳು ನಿಮಿಷ ಕೂಡ ಹಾದಿಯಲ್ಲಿ ಕಳೆದಿಲ್ಲ. ನಮ್ಮಲ್ಲೂ ಸಿಸಿಕ್ಯಾಮರಾ ಇದೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ನಂತರವಷ್ಟೇ ಸತ್ಯಾಸತ್ಯತೆಯ ಬಗ್ಗೆ ಹೇಳಲು ಸಾಧ್ಯ' ಎಂದರು.
ಆದಿಲ್ ತಂದೆ ಖಲೀಮ್ ಉಲ್ಲಾ ಇದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ. ಜೊತೆಗೆ ಅವರು ದೂರನ್ನೂ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಆರೋಪಿಗೆ ಲೋ ಬಿಪಿ ಆಗಿತ್ತು ಎಂದು ಹೇಳಲಾಗುತ್ತದೆ. ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶ ಮಾಡಿದ್ದಾರೆ. ಪೊಲೀಸರಿಗೆ ಗಾಯಗಳಾಗಿವೆ. ಎಲ್ಲದರ ತನಿಖೆ ಬಳಿಕ ನಾವು ನಿಸ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಪಿ ಉಮಾ ಅವರು ಹೇಳಿದರು.












Click it and Unblock the Notifications