ಸಂಬಂಧಿಕ ಸಹೋದರಿಯರಿಗೆ 5 ಕೋಟಿ ರೂ. ನಾಮ ಹಾಕಿದ ಮಹಿಳೆ!
ದಾವಣಗೆರೆ, ಆಗಸ್ಟ್ 20; ಮನೆಯಲ್ಲಿ ಸಹೋದರಿಯರು ಆರಾಮಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಶಾಕ್ ಕಾದಿತ್ತು. ಯಾಕೆಂದರೆ ಮನೆ ಬಳಿ ಬಂದ ಬ್ಯಾಂಕ್ ಅಧಿಕಾರಿಗಳು ಪಡೆದಿದ್ದ 5 ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡಿ ಎಂದಾಕ್ಷಣ ಆಕಾಶವೇ ಕಳಚಿ ಬಿದ್ದಂತಾಗಿದೆ.
ಹೌದು, ಇಂಥದ್ದೊಂದು ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ. ಸಹೋದರಿಯರಿಬ್ಬರು ಪತಿಯನ್ನು ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ಸಲುವಾಗಿ ಆದರೂ ನಾವು ಬದುಕಬೇಕು ಅಂತ ಇರೋ 3 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ದಿನ ನೂಕುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬ್ಯಾಂಕ್ ಅಧಿಕಾರಿಗಳು ಹೇಳಿದ ಮಾತು ಕೇಳಿ ಅವರು ಶಾಕ್ ಆಗಿದ್ದಾರೆ. ನಾವು ಸಾಲವೇ ಮಾಡಿಲ್ಲ. ಎಲ್ಲಿಂದ ಹಣ ಕಟ್ಟಬೇಕು?. ಪಡೆದಿದ್ದರೆ ಅಲ್ಲವೇ ಸಾಲವನ್ನು ಮರು ಪಾವತಿ ಮಾಡುವುದು ಎಂಬುದು ಸಹೋದರಿಯರ ವಾದ.

ಬ್ಯಾಂಕ್‌ನ ಅಧಿಕಾರಿಗಳು ಜಮೀನು, ಮನೆ ಹರಾಜು ಹಾಕೋಕೆ ಬಂದಾಗ ಸಾಲ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ಹೇಳಿದ ವಿಷಯ ಕೇಳಿ ಗೀತಮ್ಮ ಹಾಗೂ ಸಾವಿತ್ರಮ್ಮ ಕಣ್ಣೀರು ಹಾಕಿದರು.
ಘಟನೆ ಹಿನ್ನೆಲೆ; ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ನೆಲೆಸಿರುವ ಗೀತಮ್ಮ ಹಾಗೂ ಸಾವಿತ್ರಮ್ಮ ಮೂಲತಃ ಇದೇ ತಾಲೂಕಿನ ಸೋಮ್ಲಾಪುರ ಗ್ರಾಮದ ವಾಸಿಗಳು. ಇಬ್ಬರು ಸಹೋದರಿಯರಾಗಿದ್ದು, ದಾಗಿನಕಟ್ಟೆ ರಂಗಸ್ವಾಮಿ-ಜಗದೀಶ ಎಂಬುವವರ ಜೊತೆ ವಿವಾಹವಾಗಿದ್ದರು. ರಂಗಸ್ವಾಮಿ ಗೀತಮ್ಮರನ್ನು, ಸಾವಿತ್ರಮ್ಮರನ್ನು ಜಗದೀಶ್‌ಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ 16 ವರ್ಷಗಳ ಹಿಂದೆಯೇ ಇಬ್ಬರು ಮೃತಪಟ್ಟಿದ್ದರು. ಆ ಬಳಿಕ 3 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಸಹೋದರಿಯರು ಜೀವನ ನಡೆಸುತ್ತಿದ್ದಾರೆ.
ಆಗಸ್ಟ್ 18ರಂದು ಮಹಿಳೆಯರ ಮನೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಂದಿದ್ದರು. ನೀವು ಇಬ್ಬರು ಸಹೋದರಿಯರು 5 ಕೋಟಿ ರೂಪಾಯಿ ಸಾಲ ಮಾಡಿದ್ದೀರಾ. ನಿಮಗೆ ನೋಟಿಸ್ ನೀಡಿದರೂ ನೀವು ಅದಕ್ಕೆ ಉತ್ತರಿಸಿಲ್ಲ. 8 ವರ್ಷದಿಂದ ಯಾವುದೇ ಹಣವನ್ನು ಕಟ್ಟಿಲ್ಲ. ಹೀಗಾಗಿ ನಿಮ್ಮ ಮನೆ ಹಾಗೂ ಜಮೀನು ಹರಾಜು ಹಾಕುತ್ತೇವೆ ಎಂದು ಕೋರ್ಟ್ ಆದೇಶ ಹಿಡಿದುಕೊಂಡು ಬಂದಿದ್ದರು.

ಈ ವೇಳೆ ಗಾಬರಿಯಾದ ಮಹಿಳೆಯರು ಕಣ್ಣೀರು ಹಾಕಿದರು. ಊರ ಜನರೆಲ್ಲಾ ಸೇರಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ್ದಾರೆ. ಇವರ ಮನೆಯನ್ನು ನೋಡಿ ಇವರು ಸಾಲ ಪಡಿಯೋಕೆ ಹೇಗೆ ಸಾಧ್ಯ? ಅಂತ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕೋಟ್ಯಾಂತರ ರೂಪಾಯಿ ಹಣ ಪಡೆಯಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ.
ಇಷ್ಟೊಂದು ಸಾಲ ಹೇಗೆ?; 2014-15 ರಲ್ಲಿ ತೆಗೆದುಕೊಂಡ ಸಾಲವಿದು. ಇದುವರೆಗೂ ಒಂದು ನೋಟಿಸ್ ಇಲ್ಲ. ಸ್ಥಳ ಮಹಜರು ಮಾಡದೆ ಸಾಲ ನೀಡಿದ್ದು ನಿಮ್ಮ ತಪ್ಪು. ಯಾವುದೇ ಕಾರಣಕ್ಕೂ ಮನೆ, ಜಮೀನು ಹರಾಜು ಹಾಕೋಕೆ ಬಿಡಲ್ಲ ಅಂತ ಸ್ಥಳೀಯರು ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ. ಇನ್ನೂ ಇಷ್ಟೊಂದು ಹಣ ಗೀತಮ್ಮ, ಸಾವಿತ್ರಮ್ಮ ಹೆಸರಿನಲ್ಲಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.
5 ಕೋಟಿ ರೂಪಾಯಿ ಸಾಲ ಪಡೆದ ಮೂಲ ಹುಡಕಲು ಹೊರಟಾಗ ಅಚ್ಚರಿ ವಿಷಯವೊಂದು ಗೊತ್ತಾಗಿದೆ. ಗೀತಮ್ಮ ಮತ್ತು ಸಾವಿತ್ರಮ್ಮ ಸಹೋದರನ ಪತ್ನಿ ಶೋಭಾ ಇದಕ್ಕೆಲ್ಲಾ ಕಾರಣ ಎಂಬುದು ಗೊತ್ತಾಗಿದೆ. ಶೋಭಾ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದವರು. ಇಬ್ಬರು ಮಹಿಳೆಯರ ಪತಿ ತೀರಿಕೊಂಡಾಗ ವಿಧವಾ ವೇತನ ಮಾಡಿಸಿಕೊಡುತ್ತೇನೆ. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕೊಡುವಂತೆ ಕೇಳಿದ್ದರು.
ಇದೇ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಆಧಾರ ಮೇಲೆ ಶೋಭಾ ನಕಲಿ ಚಿನ್ನ ಅಡವಿಟ್ಟು ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಾರೆ. ಈ ವೇಳೆ ದಾಗಿನಕಟ್ಟೆಯ ಗೀತಮ್ಮ ಸಾವಿತ್ರಮ್ಮಗೆ ಬ್ಯಾಂಕ್‌ನಿಂದ ಸಾಲ ಕಟ್ಟುವಂತೆ ನೊಟೀಸ್ ಬಂದಿವೆ. ಹೀಗಾಗಿಯೇ ಈ ರೀತಿ ನೊಟೀಸ್ ಬಂದಾಗ ಅವುಗಳನ್ನ ನನಗೆ ಕಳುಹಿಸಿ ಕೊಡಿ ಎಂದಿದ್ದಾರೆ.
ಅವುಗಳನ್ನ ಮಹಿಳೆಯರು ಓಪನ್ ಮಾಡದೆ ನೊಟೀಸ್ ಅನ್ನು ತಮ್ಮ ಸಂಬಂಧಿ ಶೋಭಾಗೆ ಕಳುಹಿಸಿಕೊಟ್ಟಿದ್ದಾರೆ. ಆಗ ಗೊತ್ತಾಗಿದ್ದೇ ಸಂಬಂಧಿ ಶೋಭಾರಿಂದ ತಾವು ಮೋಸ ಹೋಗಿದ್ದೇವೆ ಎಂದು. ಸಂಬಂಧಿಕರು ಅಂತ ನಂಬಿದರೆ ಈ ರೀತಿ ಮೋಸ ಮಾಡಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ಒಂದು ಲಕ್ಷ ರೂಪಾಯಿ ಸಾಲ ನೀಡುವುದಕ್ಕೆ ಬ್ಯಾಂಕ್ ಹತ್ತಾರು ದಾಖಲೆ ಕೇಳುತ್ತದೆ. ಶೂರಿಟಿ ಕೇಳುತ್ತದೆ, 5 ಕೋಟಿ ಸಾಲ ನೀಡುವಾಗ ಸ್ಥಳಕ್ಕೆ ಭೇಟಿ ನೀಡಿ ಮಾಡಿದ ಸಾಲ ತೀರಿಸಲು ಯೋಗ್ಯರಿದ್ದಾರಾ? ಎಂದು ಪರಿಶೀಲನೆ ಸಹ ನಡೆಸಿಲ್ಲ. ಈಗ ಅಧಿಕಾರಿಗಳು ಧಿಡೀರ್ ಅಂತ ಮನೆ ಹರಾಜು ಹಾಕಲು ಬಂದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟ್ಯಂತರ ರೂಪಾಯಿ ಹಣ ಸಾಲ ನೀಡಿದ್ದು ಹೇಗೆ?. ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications