ಮುಡಾ ಹಗರಣ ಆರೋಪ; ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದ ಗೃಹ ಸಚಿವ ಜಿ. ಪರಮೇಶ್ವರ್
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ವಿನಾಕಾರಣ ಬಿಜೆಪಿ - ಜೆಡಿಎಸ್ ಆರೋಪ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಬಾಹಿರ ಕೆಲಸ ನಡೆಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ. ಜನರಲ್ಲಿ ತಪ್ಪು ಸಂದೇಶ ಮೂಡಿಸುವ ಸಲುವಾಗಿ ಬಿಜೆಪಿಯವರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಸಂಪತ್ತು ಹಾಳಾಗುತ್ತಿದೆ, ಲೂಟಿ ಹೊಡೆಯಲಾಗುತ್ತಿದೆ, ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ನಾವು ಪಾದಯಾತ್ರೆ ನಡೆಸಿದ್ದೆವು. ಆದ್ರೆ ಬಿಜೆಪಿಯವರು ವಿನಾಕಾರಣ ಆಪಾದನೆ ಮಾಡಿ ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ನಡೆದಿಲ್ಲವಾದರೂ ಜನಸಾಮಾನ್ಯರಿಗೆ ತಪ್ಪು ಸಂದೇಶ ನೀಡಲು ಪಾದಯಾತ್ರೆ ಮಾಡುತ್ತಿದ್ದಾರೆ. ಈ ಬಗ್ಗೆ ನಾವೂ ಸಹ ರಾಜ್ಯದ ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.
ಕಾನೂನು ಬಾಹಿರ ಕೆಲಸ ಮಾಡಿಲ್ಲ
ಬಿಜೆಪಿಯವರು ಆರೋಪಿಸಿದಂತೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಅದಕ್ಕಾಗಿಯೇ ಧೈರ್ಯದಿಂದ ಸಿಎಂ ಅವರು ನ್ಯಾಯಾಧೀಶರ ನೇತೃತ್ವದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗೂ ಒಪ್ಪಿಸಿದ್ದಾರೆ. ಯಾವುದೇ ತಪ್ಪು ಆಗಿಲ್ಲ ಎಂದು ಪರಮೇಶ್ವರ್ ಸಮರ್ಥನೆ ಮಾಡಿಕೊಂಡರು.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಹಗರಣದ ಬಗ್ಗೆ ಸಮರ್ಥಿಸುತ್ತಿಲ್ಲ. ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರೆ, ತಪ್ಪು ಮಾಡಿದ್ದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸುತ್ತೇವೆ. ಸರ್ಕಾರವು ತನಿಖೆಗೆ ಸಿಐಡಿಗೆ ಒಪ್ಪಿಸಿತ್ತು. ತನಿಖೆ ನಡೆಯುತ್ತಿದೆ. ಜೊತೆಗೆ ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದರೂ ಶಿಕ್ಷೆಗೊಳಪಡಿಸುತ್ತೇವೆ ಎಂದು ಹೇಳಿದರು.
ವಾಲ್ಮೀಕಿ ಹಗರಣ ಕುರಿತಂತೆ ತನಿಖೆ ಮುಗಿಯುವವರೆಗೆ ಉಹಾಪೋಹಗಳನ್ನು ಯಾರೂ ನಂಬುವುದು ಬೇಡ. ಸಚಿವರ ಅಕೌಂಟ್ ಗೆ ಹಣ ಹೋಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಮುಲಾಜು ಏನೂ ಇಲ್ಲ. ಎಲ್ಲಾ ವಿಚಾರಗಳ ಕುರಿತಂತೆಯೂ ತನಿಖೆ ಮಾಡುತ್ತೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಯಾವುದೇ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಅನವಶ್ಯಕ ತೊಂದರೆ ಮಾಡಿದ್ದರೆ ಇಲಾಖೆ ತನಿಖೆ ನಡೆಯುತ್ತದೆ. ತಪ್ಪು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಖಚಿತ ಎಂದು ಹೇಳಿದರು.
ನಾಯಿ ಮಾಂಸ ಮಾರಾಟ ಆರೋಪದ ಬಗ್ಗೆ ಸ್ಪಷ್ಟನೆ
ರಾಜಸ್ಥಾನದಿಂದ ವಾರಕ್ಕೊಮ್ಮೆ, ಬೇಕಾದಾಗ ಮಾಂಸವನ್ನು ತಂದು ಮಾರಾಟ ಮಾಡುತ್ತಿರುವುದು ಅವರ ವೃತ್ತಿ. ಅದು ನಡೆದುಕೊಂಡು ಬಂದಿದೆ. ಯಾರೋ ಹೋಗಿ ನಾಯಿ ಮಾಂಸ ಎಂದು ಹೇಳಿ ಅನಾವಶ್ಯಕವಾಗಿ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಸಹ ಬಂದಿದ್ದು, ಅದು ನಾಯಿ ಮಾಂಸವಲ್ಲ, ಮೇಕೆ ಮಾಂಸ ಎಂದು ವರದಿಯಲ್ಲಿದೆಯೆಂದು ತಿಳಿದು ಬಂದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಯಾರೇ ಆದರೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡಲು ಮುಂದಾದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನ ಸಮರ್ಥಿಸಿದರು.












Click it and Unblock the Notifications