ನಾನು ದುಡ್ಡು ಪಡೆದಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಬೈರತಿ ಬಸವರಾಜ್
ಇತ್ತೀಚೆಗಷ್ಟೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೇಲೆ ಲಂಚ ಪಡೆದ ಆರೋಪ ಎದುರಾಗಿತ್ತು. ಆಗಿನಿಂದ ಸಚಿವರ ಮೇಲೆ ಕಾಂಗ್ರೆಸ್‌ನವರು ಆರೋಪಗಳ ಸುರಿಮಳೆಯನ್ನೇ ಸುರಿದರು. ಇದಕ್ಕೆ ಸಚಿವರ ಪ್ರತಿಕ್ರಿಯೆ ಏನಾಗಿತ್ತು?
ದಾವಣಗೆರೆ, ಜನವರಿ, 25: ನಾನು ದುಡ್ಡು ಪಡೆದಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್‌ನವರು ಎಲ್ಲೇ ಕರೆದರೂ ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ಯಾವ ಸ್ಥಳಕ್ಕೆ ಕರೆದರೂ ನಾನು ಹೋಗಲು ಸಿದ್ಧನಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ದಾವಣಗೆರೆಯಲ್ಲಿ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುಖಾಸುಮ್ಮನೆ ಆರೋಪ ಮಾಡಿದರೆ ಹೇಗೆ? ದಾಖಲೆ ತೋರಿಸಲಿ. ಅದನ್ನು ಬಿಟ್ಟು ಬಾಯಿ ಮಾತಿನಲ್ಲಿ ಹೇಳಿದರೆ ಒಪ್ಪಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ರಾಜಕೀಯ ಮಾಡಲು ಬಂದವರು ನಾವು. ಅಧಿಕಾರದ ಲಾಲಸೆ, ಆಸೆಗೆ ಬಿದ್ದು ಏನೇನೋ ಆರೋಪ ಮಾಡಿದರೆ ಜನರು ಒಪ್ಪುವುದಿಲ್ಲ. ಎಲ್ಲವನ್ನೂ ನಿರ್ಧರಿಸುವುದು ರಾಜ್ಯದ ಜನರು. ಯಾರನ್ನು ಗೆಲ್ಲಿಸಬೇಕು, ಯಾರನ್ನ ಸೋಲಿಸಬೇಕು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ನಿಮ್ಮ ರಾಜಕಾರಣ ನೀವು ಮಾಡಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿದರು.
ಶೇಕಡಾ 40ರಷ್ಟು ಕಮಿಷನ್ ಪಡೆಯುತ್ತೇವೆ ಎಂಬ ಆರೋಪ ಮಾಡಿದ ಗುತ್ತಿಗೆದಾರರ ಸಂಘದವರು ಜೈಲಿಗೆ ಹೋಗಿ ಬಂದಿದ್ದಾರೆ. ಇವರೆಲ್ಲರೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ದಾಖಲೆಗಳಿದ್ದರೆ ಕೋರ್ಟ್‌ಗೆ ನೀಡಲಿ. ಅದನ್ನು ಬಿಟ್ಟು ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಹಾಗೆಯೇ ನಾನು ಪಡಿತರ ಅಕ್ಕಿ ಹೆಚ್ಚು ನೀಡಬೇಕೆಂದು ನಾಲ್ಕೈದು ಶಾಸಕರ ಜೊತೆ ತೆರಳಿ ಒತ್ತಾಯ, ಗಲಾಟೆ ಮಾಡಿದ್ದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ
200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಬಿಪಿಎಲ್ ಕಾರ್ಡ್ ಹೊಂದಿರುವ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಘೋಷಣೆ ಮಾಡಲಿಲ್ಲ. ವಿಧಾನಸಭೆ ಚುನಾವಣೆ ಬರುತ್ತಿದೆ. ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ. ಎಲ್ಲವನ್ನೂ ಉಚಿತವಾಗಿ ನೀಡಿದರೆ ಸರ್ಕಾರ ನಡೆಸುವುದು ಹೇಗೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮುಂದೆಯೂ ನಮ್ಮದೇ ಸರ್ಕಾರ ಬರುತ್ತದೆ
ನಾವೆಲ್ಲರೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಜೊತೆಗಿದ್ದೇವೆ. ಬಸವರಾಜ ಬೊಮ್ಮಾಯಿ, ಬಿ.ಎಸ್.ವೈ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸಲಾಗುವುದು. ಮುಂದೆಯೂ ನಮ್ಮದೇ ಸರ್ಕಾರ ಬರುತ್ತದೆ. ಕಾಂಗ್ರೆಸ್‌ನವರು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹಾಗಾಗಿ ಜನರು ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಕೆಲವರಿಂದ ಗೊಂದಲ ಸೃಷ್ಟಿಸುವ ಪ್ರಯತ್ನ
ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಸೂರ್ಯ ಇರುವುದು ಎಷ್ಟು ಸತ್ಯವೋ, ನಾವು ಬಿಜೆಪಿಯಲ್ಲಿಯೇ ಇರುವುದು ಕೂಡ ಅಷ್ಟೇ ಸತ್ಯ. ಕೆಲವರು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ ಎಂದು ಹೇಳಿದರು.

ತಾಳ್ಮೆಯಿಂದ ಕೆಲಸ ಮಾಡಿ ಎಂದು ಸಲಹೆ
ಕಾಂಗ್ರೆಸ್ ಯಾವಾಗಲೂ ವ್ಯಕ್ತಿ ಪೂಜೆ ಮಾಡಲ್ಲ. ಪಕ್ಷ ಪೂಜೆ ಮಾಡುತ್ತದೆ. ತಾಳ್ಮೆಯಿಂದ ಕೆಲಸ ಮಾಡಿ ಅಧಿಕಾರಕ್ಕೆ ತನ್ನಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಜನಧ್ವನಿ ಯಾತ್ರೆಯ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಬೇರೆ ಬೇರೆ ಅವಕಾಶ ಸಿಗುತ್ತದೆ. ತಾಳ್ಮೆಯಿಂದ ಕಾಯಬೇಕು. ಮುಂದೆ ನಿಗಮ ಮಂಡಳಿ, ಎಂಪಿ, ಎಂಎಲ್‌ಸಿ ಸೇರಿದಂತೆ ಬೇರೆ ಬೇರೆ ಅಧಿಕಾರ ಸಿಗುತ್ತದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿ ಎಂದು ಕರೆ ನೀಡಿದ್ದರು.
2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸೇರಿ ಅಧಿಕಾರ ಮಾಡಿದೆವು. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಿಜೆಪಿ ಬಂತು. ದಾವಣಗೆರೆಯ ಬಿಜೆಪಿ ಶಾಸಕರೊಬ್ಬರನ್ನು ಮಂತ್ರಿ ಮಾಡಲಿಲ್ಲ. ಇಲ್ಲಿ ನಾಯಕತ್ವಕ್ಕೆ ಬೆಲೆ ಇಲ್ಲ, ಅಭಿವೃದ್ಧಿ ಬೇಕಿಲ್ಲ ಎಂಬುದಕ್ಕೆ ಸಾಕ್ಷಿ ಇದು. ನಾವು ಬರುವಾಗ ಮೂರು ಕಡೆಗಳಲ್ಲಿ ವಾಹನ ತಡೆದಿರಿ. ವಾಹನ ನಿಲ್ಲಿಸಿದರು. 200-300 ಬೆಂಬಲಿಗರ ತೋರಿಸಿದರೆ ನಾವು ಜಗ್ಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications