ಬಿಟ್ ಕಾಯಿನ್ ಹಗರಣ; ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಎಸ್‌ವೈ ಪುತ್ರರು
ದಾವಣಗೆರೆ, ನವೆಂಬರ್ 11; ಬಿಟ್ ಕಾಯಿನ್ ಹಗರಣ ಕೇವಲ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸುದ್ದಿ ಮಾಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರವೇ ನಡೆಯುತ್ತಿದೆ. ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರರಾದ ಬಿ. ವೈ. ರಾಘವೇಂದ್ರ ಹಾಗೂ ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ಮೇಲೆ ಈ ವಿಚಾರದಲ್ಲಿ ಹರಿಹಾಯ್ದಿದ್ದಾರೆ.
Recommended Video
ದಾವಣಗೆರೆ ನಗರದ ಜಿಎಂಐಟಿಯಲ್ಲಿ ಹೊಸ ಕಾರು ಶೋ ರೂಂನ ಉದ್ಘಾಟನೆ ಹಿನ್ನೆಲೆಯಲ್ಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ರಾಘವೇಂದ್ರ ಹಾಗೂ ವಿಜಯೇಂದ್ರ ವಿನಾಕಾರಣ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಯ ಬಗ್ಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದರೂ, ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ. ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಲೇ ಮಾತನಾಡಲು ಆಗದು. ಸ್ವಲ್ಪ ಕಾಯಬೇಕು ಎಂದರು.
ರಾಘವೇಂದ್ರ ಹೇಳಿದ್ದೇನು; ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, "ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರ ಹೆಸರನ್ನು ಮುಚ್ಚಿಡುವ ಪ್ರಶ್ನೆ ಇಲ್ಲ ಎಂಬುದಾಗಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಕಳೆದ ಎರಡರಿಂದ ಮೂರು ವರ್ಷದಿಂದಲೂ ತನಿಖೆ ನಡೆಯುತ್ತಿದೆ. ಮೊಸರಲ್ಲಿ ಕಲ್ಲು ಹುಡುಕುತ್ತಿರುವ ಕಾಂಗ್ರೆಸ್ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದರು.

"ಇಷ್ಟು ದಿನ ಕಾಂಗ್ರೆಸ್‌ನವರು ಅಧಿಕೃತವಾಗಿ ಯಾವುದೇ ದಾಖಲೆಗಳಿಲ್ಲ ಎಂಬ ಮಾತು ಹೇಳುತ್ತಲೇ ಬರುತ್ತಿದ್ದರು. ಈಗ ಇಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೊನ್ನೆ ಮೊನ್ನೆ ಉಪಚುನಾವಣೆ ಮುಗಿದಿದೆ. ವಿಧಾನಪರಿಷತ್ ಚುನಾವಣೆ ಬರುತ್ತಿದೆ. ಯಾವುದೇ ವಿಷಯಗಳಿಲ್ಲ. ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಬಳಿ ಹೇಳಲು ಆಗುತ್ತಿಲ್ಲ. ಏನಾದರೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ಯಶಸ್ವಿಯಾಗಲ್ಲ. ಪ್ರಜ್ಞಾವಂತ ಮತದಾರರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ" ಎಂದರು.
"ಈ ಹಗರಣದ ತನಿಖೆ ನಡೆಯುತ್ತಿರುವುದು ಇಂದು, ನಿನ್ನೆಯದಲ್ಲ. ಎರಡು ವರ್ಷದ ಹಿಂದಿನಿಂದಲೂ ತನಿಖೆ ನಡೆಯುತ್ತಿದೆ. ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ವೇಳೆಯಲ್ಲಿ ನಾವು ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಗಾಳಿಯಲ್ಲಿ ಗುಂಡು ಹೊಡೆದಂತೆ ಜನರಿಗೆ ತಪ್ಪು ಕಲ್ಪನೆ ಮಾಡುವ ಕೆಲಸ ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಯಾವುದೂ ಯಶಸ್ವಿಯಾಗಲ್ಲ" ಎಂದು ತಿಳಿಸಿದರು.
ವಿಜಯೇಂದ್ರ ಹೇಳಿದ್ದೇನು?; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ, "ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದವರು ಹತಾಶರಾಗಿ ಬಿಜೆಪಿಯವರ ಮೇಲೆ ಆರೋಪ ಮಾಡುವುದು, ಟೀಕೆ ಮಾಡುವುದು ಸರಿಯಲ್ಲ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟವಾಗಿ ಹೇಳಿದ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ" ಎಂದರು.
"ಬಿಟ್ ಕಾಯಿನ್ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರ ಹೆಸರು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಹ್ಯಾರೀಸ್ ಕಿರಿಯ ಪುತ್ರ ನಲಪಾಡ್ ಸೇರಿ ಕಾಂಗ್ರೆಸ್ ನಾಯಕರ ಹೆಸರು ಕೇಳಿ ಬರುತ್ತಿದೆ. ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವಂತಿದೆ. ಈಗಾಗಲೇ ಸಿಎಂ ತನಿಖೆ ನಡೆಯುತ್ತಿದೆ ಎಂಬುದಾಗಿ ಹೇಳಿದ್ದಾರೆ. ಬರುವ ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ. ಯಾರೇ ಭಾಗಿಯಾಗಿದ್ದರೂ ಯಾವುದೇ ಕಾರಣಕ್ಕೂ ಮುಚ್ಚಿಡುವುದಕ್ಕೂ ಆಗಲ್ಲ. ಎಲ್ಲವೂ ಜನರ ಮುಂದೆ ಬಂದೇ ಬರುತ್ತದೆ" ಎಂದು ಹೇಳಿದರು.
"ವಿನಾಕಾರಣ ಬಸವರಾಜ ಬೊಮ್ಮಾಯಿ ಹೆಸರು ಹೇಳುವ ಪ್ರಯತ್ನವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಯಾವುದೇ ತನಿಖೆಗೆ ಸಿದ್ದರಿದ್ದೇವೆ ಎಂಬುದಾಗಿ ಸಿಎಂ ಅವರೇ ಹೇಳಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ತನಿಖೆ ನಡೆಯುವ ವೇಳೆ ಬಹಿರಂಗ ಮಾಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ವಿಜಯೇಂದ್ರ ಪ್ರಶ್ನಿಸಿದರು.












Click it and Unblock the Notifications