ದಾವಣಗೆರೆ: ಜಾತಿ, ಧರ್ಮವನ್ನು ಲೆಕ್ಕಿಸದೇ ಸಾವಿರಾರು ಜನರ ಜೀವ ಉಳಿಸಿದ ಆಂಬ್ಯುಲೆನ್ಸ್ ಆಪ್ತರಕ್ಷಕ ಇನ್ನಿಲ್ಲ, ಆಕ್ರಂದನ
ದಾವಣಗೆರೆ, ಆಗಸ್ಟ್, 18: ಆತ ತನ್ನ ಆಂಬ್ಯುಲೆನ್ಸ್ ಮೂಲಕ ಸಾವಿರಾರು ಜನರ ಪ್ರಾಣ ರಕ್ಷಿಸಿದ್ದ. ಎಷ್ಟೋ ಮಂದಿ ತನ್ನ ಉಸಿರು ನಿಂತಿತು ಎಂದುಕೊಂಡವರ ಜೀವ ಉಳಿಸಿದ ಜೀವರಕ್ಷಕನಾಗಿದ್ದ. ಹೀಗೆ ಹಗಲು ರಾತ್ರಿ ಎನ್ನದೇ ಎಂತಹ ಸನ್ನಿವೇಶವಾದರೂ ಸರಿ ತನ್ನ ಆಂಬ್ಯುಲೆನ್ಸ್‌ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಪ್ತರಕ್ಷಕ ಇದೀಗ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇವರು ಜಾತಿ, ಮತ, ಧರ್ಮ ನೋಡಿದವರಲ್ಲ. ಎಲ್ಲರ ಪಾಲಿನ ಆಪದ್ಭಾಂಧವ ಅಂತಾನೇ ಖ್ಯಾತಿ ಗಳಿಸಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೂ ಬಡವರಿಗೆ ಸೇವೆ ನೀಡಬೇಕೆಂಬ ಮಹಾದಾಸೆಯಂತೆ ಆಂಬ್ಯುಲೆನ್ಸ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದ ಇವರ ಸಾವು ನಿಜಕ್ಕೂ ದುರಂತ.

ದಾವಣಗೆರೆಯ ಬಿಸ್ಮಿಲ್ಲಾ ಲೇ ಔಟ್ ಪಕ್ಕದ ಶಾಸ್ತ್ರಿ ಲೇಔಟ್‌ನ ಅಲಿಕಾ ಶಾಲೆಯ ಸಮೀಪ ವಾಸವಾಗಿದ್ದ ಹಸೇನ್ ಸಾವು ನಿಜಕ್ಕೂ ದೇವರ ಇಷ್ಟೊಂದು ಕ್ರೂರಿಯೇ ಎನಿಸದಿರದು. ಯಾಕೆಂದರೆ ಹಸೇನ್ ಎಂದರೆ ಎಷ್ಟೋ ಮಂದಿಗೆ ಗೊತ್ತಾಗುವುದೇ ಇಲ್ಲ. ಹಸೇನ್ ಆಂಬ್ಯುಲೆನ್ಸ್ ಎಂದರೆ ಪ್ರತಿಯೊಬ್ಬರಿಗೂ ಚಿರಪರಿಚಿತ. ಅಷ್ಟೊಂದು ಸೇವೆಗೆ ಹೆಸರುವಾಸಿಯಾಗಿದ್ದರು. ಎಲ್ಲಾ ಧರ್ಮದವರಿಗೂ ಸಹಾಯ ಮಾಡಿದ್ದರು. ಇನ್ನು ರೋಗಿಗಳ ಪಾಲಿಗೆ ಆಪದ್ಭಾಂಧವ ಆಗಿದ್ದರು.
ದಾವಣಗೆರೆ ಜಿಲ್ಲಾಸ್ಪತ್ರೆಯಿಂದ ರೋಗಿಯೊಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಯನಪೋಯಾ ಆಸ್ಪತ್ರೆಗೆ ತನ್ನ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ದಾವಣಗೆರೆಗೆ ಬರುತ್ತಿದ್ದರು. ಅಲ್ಲಿಂದ 4 ಕಿಲೋ ಮೀಟರ್ ದೂರ ಕ್ರಮಿಸುತ್ತಲೇ ಇದ್ದಕ್ಕಿದ್ದ ಹಾಗೆ ಹಸೇನ್ ಅವರಿಗೆ ವಾಂತಿ ಆಯಿತು.
ಕೂಡಲೇ ಪಕ್ಕಕ್ಕೆ ಆಂಬ್ಯುಲೆನ್ಸ್ ನಿಲ್ಲಿಸಿದರು. ಬಳಿಕ ಜೊತೆಗೆ ತೆರಳಿದ್ದವರು ವಾಹನ ಚಾಲನೆ ಮಾಡಲು ಮುಂದಾದರು. ವಾಂತಿ ಹೆಚ್ಚಾಗುತ್ತಲೇ ಆಸ್ಪತ್ರೆಗೆ ಹಸೇನ್ ಆಂಬ್ಯುಲೆನ್ಸ್ ಅವರನ್ನು ಸೇರಿಸಲಾಯಿತು. ಎದೆನೋವು ಕಾಣಿಸಿಕೊಂಡಿದ್ದು, ಈ ವೇಳೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಬೇರೆಯೊಬ್ಬ ರೋಗಿಯ ಜೀವ ಉಳಿಸಿದ ಜೀವರಕ್ಷಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಹುಸೇನ್ ವಿದ್ಯಾಭ್ಯಾಸದ ವಿವರ
ಹಸೇನ್ ಆಂಬ್ಯುಲೆನ್ಸ್ ಅವರು ಓದಿದ್ದು ಎಸ್‌ಎಸ್‌ಎಲ್‌ಸಿ. ತಂದೆ ಬಕ್ಷೀಸ್ ಸಾಬ್ ಅವರು ಹೂವಿನ ವ್ಯಾಪಾರ ಮಾಡಿಕೊಂಡು ಸಂಸಾರ ನೀಗಿಸುತ್ತಿದ್ದರು. ತುಂಬು ಕುಟುಂಬ ಇವರದ್ದಾಗಿತ್ತು. ಸಹೋದರ, ಸಹೋದರಿಯರು, ತಾಯಿ ಸೇರಿದಂತೆ ದೊಡ್ಡ ಬಳಗ ಹೊಂದಿದ್ದ ಹಸೇನ್ ಅವರಿಗೆ ಮೂವರು ಮಕ್ಕಳು, ಪತ್ನಿ ಇದ್ದು, ಇದೀಗ ಅವರು ಅಪಾರ ಬಂಧುಬಳಗವನ್ನೇ ಅಗಲಿದ್ದಾರೆ.
ಇಬ್ಬರು ಅಣ್ಣಂದಿರು, ಮೂವರು ತಂಗಿಯರು, ಇಬ್ಬರು ಅಕ್ಕಂದಿರು, ಒಬ್ಬ ಸಹೋದರ ಸಹ ಇದ್ದಾರೆ. ಇನ್ನು ಹುಸೇನ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯಾರೇ ಎಷ್ಟೊತ್ತಿಗೆ ಕರೆದರೂ ಆಸ್ಪತ್ರೆಗೆ ಕರೆದಕೊಂಡು ಹೋಗಲು ಆಂಬ್ಯುಲೆನ್ಸ್ ರೆಡಿ ಇಟ್ಟಿರುತ್ತಿದ್ದರು. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಪಡೆಯುತ್ತಿರಲಿಲ್ಲ. ಒಂದು ವೇಳೆ ರೋಗಿಯ ಸಂಬಂಧಿಕರು ಕೊಟ್ಟರೆ ಮಾತ್ರ ಹಣ ಪಡೆಯುತ್ತಿದ್ದರು. ಅದರಲ್ಲೂ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಉಚಿತ ಸೇವೆ ನೀಡಿರುವುದೇ ಹೆಚ್ಚು.
ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುವುದಿದ್ದರೆ ಮಾತ್ರ ಹಣ ಪಡೆಯುತ್ತಿದ್ದರು. ಇಷ್ಟೇ ಬೇಕೆಂದು ಎಂದಿಗೂ ಬೇಡಿಕೆ ಇಟ್ಟವರಲ್ಲ. ಹಾಗಾಗಿ, ಹಸೇನ್ ಆಂಬ್ಯುಲೆನ್ಸ್ ಅಂತಾನೇ ಅವರನ್ನು ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು.
ಇನ್ನು ಆಂಬ್ಯುಲೆನ್ಸ್ ಖರೀದಿಸಲು ಅಷ್ಟೊಂದು ಹಣ ಇರಲಿಲ್ಲ. ತಂಜುಮಿನ್ ಮುಸ್ಲಿಂ ಫಂಡ್ ಅಸೋಸಿಯೇಷನ್‌ನ ದಾದಾಪೀರ್ ಸೇಠ್ ಅವರು ತನ್ನ ತಂದೆ ಹೆಸರಿನಲ್ಲಿ ಆಂಬ್ಯುಲೆನ್ಸ್ ಉಡುಗೊರೆಯಾಗಿ ನೀಡಿದ್ದರು. ಇದರಲ್ಲಿಯೇ ಸಮಾಜ ಸೇವೆ ಮಾಡುತ್ತಾ ಎಲ್ಲರ ಚಿರಪರಿಚಿತರಾಗಿದ್ದರು.
ಹುಸೇನ್ ಬಾಲ್ಯದ ಆಸೆ ಏನು?
ಎಸ್‌ಎಸ್ಎಲ್‌ಸಿ ಓದುತ್ತಿರುವಾಗಲೇ ಸಮಾಜ ಸೇವೆ ಮಾಡಬೇಕು, ಬಡವರಿಗೆ ನೆರವಾಗಬೇಕು, ಕೈಯಲ್ಲಾದಷ್ಟು ಸಹಾಯ ಮಾಡಬೇಕು ಎಂಬ ಬಯಕೆ ಹೊಂದಿದ್ದರು. ಅದರಂತೆಯೇ ಕೆಲಸ ಮಾಡಿದರು, ಜನರ ಕಷ್ಟಕ್ಕೆ ಸ್ಪಂದಿಸಿದರು. ಹೀಗೆ ಹಗಲು ರಾತ್ರಿ ಎನ್ನದೇ ಸೇವೆ ಮಾಡಿದರು.












Click it and Unblock the Notifications