ಗ್ರಾಮೀಣ ಭಾಗದಲ್ಲಿ ಶೇ 60ರಷ್ಟು ಕೋವಿಡ್ ಪ್ರಕರಣಗಳು ಪತ್ತೆ
ದಾವಣಗೆರೆ, ಮೇ 17; "ಗ್ರಾಮೀಣ ಭಾಗದಲ್ಲಿಯೂ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಶೇಕಡಾ 60ರಷ್ಟು ಪ್ರಕರಣಗಳು ಈ ಭಾಗದಲ್ಲಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ" ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆತಂಕ ವ್ಯಕ್ತಪಡಿಸಿದ್ದಾರೆ.
"ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬಾರದಿರುವುದು ಹಾಗೂ ಗುಣ ಲಕ್ಷಣಗಳಿದ್ದರೂ ಮುಚ್ಚಿಡುತ್ತಿರುವುದರಿಂದ ಸಾವಿನ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಟೆಸ್ಟ್ ಮಾಡಿಸಿಕೊಂಡಿಲ್ಲ, ಆಸ್ಪತ್ರೆಗೆ ಬಂದಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೊರೊನಾ ಸೋಂಕು ಬಹಳ ಅಪಾಯಕಾರಿಯಾಗಿದೆ" ಎಂದು ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, "ಸ್ಥಳೀಯ ವೈದ್ಯರ ಬಳಿ ತೋರಿಸಿ ಮೆಡಿಕಲ್ ಶಾಪ್ ಗಳಲ್ಲಿ ಔಷಧ ಪಡೆದು ಸುಮ್ಮನಾಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಮೂವರಿಂದ ನಾಲ್ವರು ಸಾವನ್ನಪ್ಪುತ್ತಿರುವ ಮಾಹಿತಿ ಬಂದಿದೆ" ಎಂದರು.

"ಕಳೆದ ವರ್ಷ ಒಂದು ಕೇಸ್ ಬಂದಾಗ ಬೇಲಿ ಹಾಕಿ ಹಳ್ಳಿಗಳನ್ನು ರಕ್ಷಿಸಿಕೊಂಡರು. ಆದರೆ ಈಗ ಸೋಂಕಿತರು ಓಣಿಯಲ್ಲೇ ಓಡಾಡಿಕೊಂಡಿದ್ದರೂ ಸುಮ್ಮನಿದ್ದಾರೆ. ಸಹಜವಾಗಿಯೇ ಊರಿಗೆ ಸೋಂಕು ಹರಡುತ್ತದೆ. ಹೊರಗಡೆ ಓಡಾಡುವುದು ಕಂಡು ಬಂದರೆ ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ. ನೀವು ಕೈಜೋಡಿಸದಿದ್ದರೆ ನಮ್ಮ ಪ್ರಯತ್ನವೆಲ್ಲವೂ ವ್ಯರ್ಥವಾಗುತ್ತದೆ" ಎಂದು ಗ್ರಾಮೀಣ ಭಾಗದ ಜನರಿಗೆ ಕರೆ ನೀಡಿದರು.
"ಊರಿಗೆ ಕೊರೊನಾ ಟೆಸ್ಟ್ ಮಾಡಿಸಲು ಬಂದಾಗ ಸಹಕರಿಸಬೇಕು. ಅದನ್ನು ಬಿಟ್ಟು ನಾ ಪರೀಕ್ಷೆ ಮಾಡಿಸಿಕೊಳ್ಲಲ್ಲ ಎಂದು ಹೇಳುವ ಮೂಲಕ ಅಸಹಕಾರ ತೋರಬೇಡಿ. ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ" ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಮೇ 16ರ ಮಾಹಿತಿಯಂತೆ ದಾವಣಗೆರೆಯಲ್ಲಿ 1155 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3656. ಇದುವರೆಗೂ ಜಿಲ್ಲೆಯಲ್ಲಿ 312 ಜನರು ಮೃತಪಟ್ಟಿದ್ದಾರೆ.












Click it and Unblock the Notifications