ದಾವಣಗೆರೆ ಜಿಲ್ಲೆಗೆ 22.50 ಕೋಟಿ ರೂ. ಅನುದಾನ ಬಿಡುಗಡೆ, ಯೋಜನೆಗಳ ವಿವರ ತಿಳಿಯಿರಿ
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ದಾವಣಗೆರೆ ಜಿಲ್ಲೆಗೆ ಕೊಟ್ಟ ಅನುದಾನದ ವಿವರ ಇಲ್ಲಿದೆ ನೋಡಿ.
ದಾವಣಗೆರೆ, ಫೆಬ್ರವರಿ, 07: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ದಾವಣಗೆರೆ ಜಿಲ್ಲೆಗೆ 22.50 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕ ಕೆ. ಎನ್. ಓಂಕಾರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ 100ಕೋಟಿ ರೂಪಾಯಿಗಳ ಅನುದಾನ ಲಭ್ಯವಿದ್ದು, ಕಾಮಗಾರಿಗಳಿಗೆ ಒಂದೊಂದಾಗಿ ಅನುಮೋದನೆ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆ ಸಿ.ಎಸ್.ಆರ್. ಫಂಡ್‌ನಿಂದ ಜಿಲ್ಲೆಯ ಚಿಗಟೇರಿ ಆಸ್ಪತ್ರೆಯ ವೈದ್ಯಕೀಯ ಸಲಕರಣೆಗಳಿಗೆ 3.87 ಕೋಟಿ ರೂಪಾಯಿ ನೀಡಿದೆ. ಈ ಹಣ ಜಿಲ್ಲೆಯ ಸಾರ್ವಜನಿಕರಿಗೆ ಸದುಪಯೋಗವಾಗಲಿದೆ. ಪವರ್ ಗ್ರಿಡ್ ಸಂಸ್ಥೆ ಸಿಎಸ್‌ಆರ್ ಫಂಡ್ ನೆರವಿನ ಒಡಂಬಡಿಕೆ ಮಾಡಲಾಗಿದೆ ಎಂದು ಹೇಳಿದರು.
ಸಿ. ಆರ್.ಎಸ್‌ನಿಂದ ಅನುದಾನ ಬಿಡುಗಡೆ
ಜಿಲ್ಲೆಗೆ ಪ್ರಥಮವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪವರ್ ಗ್ರೀಡ್ ಸಂಸ್ಥೆಯ ಸಿ. ಆರ್.ಎಸ್‌ನಿಂದ ಅನುದಾನ ಬಿಡುಗಡೆ ಆಗುತ್ತಿದೆ. ಇನ್ನ ಹೆಚ್ಚಿನದಾಗಿ ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ಪಾಲಿಕೆಗೆ ಸಂಬಂಧಿಸಿದಂತೆ ಇರುವ ಬೇಡಿಕೆಗಳನ್ನು ಸಹ ಈಡೇರಿಸಬೇಕು. ದಾವಣಗೆರೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ವಿವಿಧ ರಾಜ್ಯಗಳ ಹಲವು ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದರು.

23 ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ
ನವದೆಹಲಿ ಮತ್ತು ಗುರುಗ್ರಾಮದಲ್ಲಿ ವಿದ್ಯುತ್ ಅನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸರಬರಾಜು ಮಾಡುವ ಕೇಂದ್ರಗಳಿದ್ದು, ನೆರೆಯ ದೇಶಗಳಿಗೆ ಇದೇ ಸಂಸ್ಥೆಯ ಅಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ವ್ಯವಸ್ಥೆಯು 23 ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಇದರ 265 ಉಪವಿಭಾಗಗಳು ಕೂಡ ಇವೆ. ನಮ್ಮ ದೇಶದ ಸುತ್ತಮುತ್ತಲಿನ ದೇಶಗಳಿಗೆ ವಿದ್ಯುತ್ ಲಿಂಕ್‌ಮಾಡುವ ಏಕೈಕ ಸಂಸ್ಥೆ ಪಿಜಿಸಿಎಲ್ ಆಗಿದೆ. ಇದು ಸೋಲಾರ್ ಪವರ್ ಜನರೇಟ್ ಮಾಡುತ್ತದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಇದು ಬಳಕೆಯಲ್ಲಿದೆ. ಕಳೆದ ವರ್ಷ 17,384 ಕೋಟಿ ರೂಪಾಯಿ ಲಾಭದಲ್ಲಿ ಇತ್ತು ಎಂದು ಮಾಹಿತಿ ನೀಡಿದರು.
ಈವರೆಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ದಕ್ಷಿಣ ಭಾರತದಿಂದ ಯಾವ ಪ್ರತಿನಿಧಿಯೂ ನೇಮಕ ಆಗಿರಲಿಲ್ಲ. ಇದೀಗ ನಾನು ನಿರ್ದೇಶಕನಾಗಿದ್ದೇನೆ. ಈ ಹಿಂದೆ ಕರ್ನಾಟಕ, ಕೇರಳಕ್ಕೆ ಅನುದಾನ ಬಂದಿರಲಿಲ್ಲ. ನಾನು ಅಧಿಕಾರ ವಹಿಸಿಕೊಂಡ ಮೇಲೆ ಚಿಗಟೇರಿ ಆಸ್ಪತ್ರೆಗೆ 3,87,26000 ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ ಅಲ್ಟ್ರಾಸೌಂಡ್, ರೆಫ್ರಜರೇಟರ್, ಲ್ಯಾಪ್ರಾಸ್ಕೋಪಿ, ಎಂಡೋಸ್ಕೋಪಿ, ಎಲೆವೇಟರ್ ಸೇರಿದಂತೆ ಇತರೆ ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಚ್.ಎಸ್. ಲಿಂಗರಾಜ್, ಗಣೇಶ್ ಕರೂರು, ಡಿ.ಎಸ್. ಜಯಣ್ಣ, ಕೆ. ಪದ್ಮನಾಭ ಶೆಟ್ಟಿ, ಆರ್. ಪ್ರತಾಪ್, ಅಜ್ಜಯ್ಯ, ಚಂದ್ರಪ್ಪ, ಕಿಶೋರ್ ಕುಮಾರ್ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.












Click it and Unblock the Notifications