Ramanatha Rai Profile: ಆರು ಗೆಲುವು, ಎರಡು ಸೋಲು, ಒಂದೇ ಪಕ್ಷ, ರಮಾನಾಥ್ ರೈ ವ್ಯಕ್ತಿ ಪರಿಚಯ
ಮಂಗಳೂರು, ಮಾರ್ಚ್ 29: ದಕ್ಷಿಣ ಕನ್ನಡ ಜಿಲ್ಲೆಯ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ರಮಾನಾಥ್ ರೈ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅವಧಿಗಳಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಲು ಶ್ರಮಿಸಿದ ನಾಯಕರಲ್ಲಿ ರಮಾನಾಥ್ ರೈ ಕೂಡ ಒಬ್ಬರು. ಆರು ಬಾರಿ ಶಾಸಕರಾಗಿರುವ ರಮಾನಾಥ್ ರೈ ಅವರ ರಾಜಕೀಯ ಪಯಣದ ಮಾಹಿತಿ ಇಲ್ಲಿದೆ.
ರಮಾನಾಥ್ ರೈ ಅವರು 13 ಸೆಪ್ಟೆಂಬರ್ 1952 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಮೂಲ ಕುಟುಂಬದಲ್ಲಿ ಜನಿಸಿದ್ದು, ಸುಮಾರು 50 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಮಾನಾಥ ರೈ ಅವರ ವಿಶೇಷತೆ ಅಂದರೆ ಒಂದೇ ಪಕ್ಷದಿಂದ ಮತ್ತು ಕ್ಷೇತ್ರದಿಂದ ಸತತವಾಗಿ ಗೆಲುವು ಪಡೆದಿರುವ ಏಕೈಕ ಅಭ್ಯರ್ಥಿ ಎಂಬ ದಾಖಲೆ ಇವರದ್ದಾಗಿದೆ. ರಾಜ್ಯದ ಮೂವರು ಮುಖ್ಯಮಂತ್ರಿಗಳೊಂದಿಗೆ ಸಚಿವ ಸಂಪುಟ ಸಹದ್ಯೋಗಿಯಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.
ಸುಮಾರು ಎಂಟು ವಿಧಾನಸಭಾ ಚುನಾವಣೆಗಳನ್ನು ಎದುರಿಸಿರುವ ರಮಾನಾಥ್ ರೈ ಅವರು ಕೇವಲ ಎರಡು ಬಾರಿ ಸೋಲು ಕಂಡಿದ್ದು, ಸತತ ಆರು ಬಾರಿ ಒಂದೇ ಕ್ಷೇತ್ರದಲ್ಲಿ ಒಂದೇ ಪಕ್ಷದಲ್ಲಿ ಗೆಲುವು ಸಾಧಿಸಿದ್ದಾರೆ. 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆ ಕಣಕ್ಕಿಳಿದ ರಮಾನಾಥ್ ರೈ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಬಂಟ್ವಾಳದಲ್ಲಿ ತಮ್ಮ ಅಥಿಪತ್ಯ ಸಾಧಿಸಿದರು. ಈ ಗೆಲುವಿನ ಬಳಿಕ ಹಿಂದಿರುಗಿ ನೋಡದ ಅವರು ಗೆಲುವಿನ ನಾಗಾಲೋಟ ಮುಂದುವರಿಸಿದರು.

1989, 1994, 1999, 2008 ಮತ್ತು 2013ರಲ್ಲಿ ಸತತವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಜನ ಮನ್ನಣೆಗಳಿಸಿದ್ದು. ಕೇವಲ ಶಾಸಕರಾಗಿ ಅಷ್ಟೇ ಅಲ್ಲದೇ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1992ರಲ್ಲಿ ರಾಜ್ಯ ಗೃಹ ಸಚಿವರಾಗಿ, 1994ರಲ್ಲಿ ಅಬಕಾರಿ ಸಚಿವರಾಗಿ, 1999ರಲ್ಲಿ ಬಂದರು - ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆ ಸಚಿವರಾಗಿ, 2013ರಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಸತತ ಎಂಟು ಬಾರಿ ಬಂಟ್ವಾಳ ಕ್ಷೇತ್ರದಿಂದಲೇ ಸ್ಪರ್ಧಿಸಿರುವ ರಮಾನಾಥ ರೈ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಎಡುರು ಸೋಲು ಕಂಡಿದ್ದಾರೆ. 1985ರಿಂದ ನಾಲ್ಕು ಬಾರಿ ಶಾಸಕರಾಗಿದ್ದ ರಮಾನಾಥ ರೈ ಅವರಿಗೆ 2004ರಲ್ಲಿ ಮೊದಲ ಬಾರಿಗೆ ಸೋಲು ಎದುರಾಗಿತ್ತು. ಬಿಜೆಪಿ ಅಭ್ಯರ್ಥಿ ಬಿ.ನಾಗರಾಜ ಶೆಟ್ಟಿ ವಿರುದ್ಧ 5,926 ಮತಗಳ ಅಂತರದಲ್ಲಿ ರಮಾನಾಥ ರೈ ಸೋಲು ಕಂಡಿದ್ದರು. ತಮ್ಮ ಮೊದಲ ಸೋಲಿನ ಬಳಿಕ ಕಂಗೆಡದ ರಮಾನಾಥ ರೈ ಕ್ಷೇತ್ರದಲ್ಲಿ ಮತ್ತೆ ಪಕ್ಷ ಸಂಘಟಿಸಿ 2008 ಹಾಗೂ 2013 ಮತ್ತೆ ಗೆಲುವು ಸಾಧಿಸಿದ್ದರು.

ಒಂದು ಸೋಲಿನ ಬ್ರೇಕ್‌ನ ಬಳಿಕ ಮತ್ತೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದ ರಮಾನಾಥ ರೈ 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದಿಂದ ಬಂಟ್ವಾಳ ಕ್ಷೇತ್ರದಿಂದಲೇ ಕಣಕ್ಕಿಳಿದರು. ಮತ್ತೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ರಮಾನಾಥ ರೈಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ವಿರುದ್ಧ ಎರಡನೇ ಸೋಲು ಕಂಡರು. 81,831 ಮತಗಳನ್ನು ಪಡೆದಿದ್ದ ರಮಾನಾಥ ರೈ ರಾಜೇಶ್ ನಾಯಕ್ ವಿರುದ್ಧ 15,971 ಮತಗಳ ಅಂತರದಲ್ಲಿ ಸೋಲು ಕಂಡರು.
ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ರಮಾನಾಥ್ ರೈ ಇದು ನನ್ನ ಕೊನೆಯ ಚುನಾವಣೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈ ಚುನಾವಣೆ ಬಳಿಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿರುವ ರಮಾನಾಥ್ ರೈ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ. ಇನ್ನು https://www.facebook.com/ramanatha.rai/photos ಎನ್ನುವ ಫೇಸ್‌ಬುಕ್ ಖಾತೆ ಮೂಲಕ ರಮಾನಾಥ್ ರೈ ಸದಾ ಜನರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.












Click it and Unblock the Notifications