ಅಂಗವೈಕಲ್ಯ ಮೆಟ್ಟಿ ನಿಂತ ರೈತ: ತೆವಳುತ್ತಲೇ ಕೃಷಿಯಲ್ಲಿ ಸಾಧನೆಗೈದ ಸೂರಪ್ಪನಹಟ್ಟಿ ಬಾಲಣ್ಣ
ಚಿತ್ರದುರ್ಗ, ಆಗಸ್ಟ್ 14: ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಒಂದಲ್ಲ ಒಂದು ವಿಶೇಷ ಸಾಧನೆ ಮಾಡಿರುವುದನ್ನು ಗಮನಿಸಬಹುದು. ಅದರಲ್ಲೂ ಇನ್ನೊಬ್ಬ ವಿಶೇಷ ಚೇತನರೊಬ್ಬರು ತನ್ನ ವಿಶೇಷ ಚೇತನವನ್ನು ಮೀರಿ ಕೃಷಿಯಲ್ಲಿ ವಿಶೇಷ ಲಾಭದಾಯಕ ಬೆಳೆಗಳನ್ನು ಬೆಳೆಯುವ ಮೂಲಕ ಯುವ ರೈತ ಸಮುದಾಯಕ್ಕೆ ಹಾಗೂ ಜನರಿಗೆ ಮಾದರಿಯಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ 45 ವರ್ಷದ ವಿಶೇಷ ಚೇತನವನ್ನು ಮೆಟ್ಟಿನಿಂತಿರುವ ಅಪರೂಪದ ರೈತ ಬಾಲಣ್ಣ ತನ್ನ ಜಮೀನಿನಲ್ಲಿ ಲಾಭದಾಯಕ ಬೆಳೆಗಳನ್ನು ಬೆಳೆದು ಯುವ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಈ ರೈತ ಕೃಷಿ ಮಾಡಿಕೊಂಡೇ ತನ್ನ ಜೀವನ ಸಾಗಿಸುವ ಜೊತೆಗೆ ಪ್ರತಿ ವರ್ಷಕ್ಕೆ ಎರಡ್ಮೂರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತನ್ನ ಕುಟುಂಬ ನಿರ್ವಹಣೆ ಮಾಡುವ ಮೂಲಕ ತನ್ನ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಬಾಲಣ್ಣ ವಿಶೇಷ ಚೇತನರಾಗಿದ್ದು ಹೇಗೆ..?
ಸೂರಪ್ಪನಹಟ್ಪಿ ಗ್ರಾಮದ 45 ವರ್ಷದ ಬಾಲಣ್ಣ ಈ ಹಿಂದೆ ದಕ್ಷಿಣ ಕನ್ನಡ ಕಾರ್ಕಳದ ಅಕ್ಕಿ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಭತ್ತದ ಚೀಲವೊಂದು ತನ್ನ ಮೈಮೇಲೆ ಬಿದ್ದುದರಿಂದ ಸೊಂಟ ಹಾಗೂ ಕಾಲುಗಳ ಸ್ವಾಧೀನ ಕಳೆದುಕೊಳ್ಳಲಾಯಿತು. ಕಾರ್ಕಳದ ಅಕ್ಕಿ ಗಿರಣಿ ಮಾಲೀಕ ಬಾಲಣ್ಣನಿಗೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೂ ಚಿಕಿತ್ಸೆ ಮಾತ್ರ ಉಪಯೋಗಕ್ಕೆ ಬರಲಿಲ್ಲ ಎನ್ನಬಹುದು.
ಮತ್ತೊಂದು ಕಡೆ ಐದು ವರ್ಷ ಪೋಷಕರು, ಸೋದರರ, ನಿರ್ಲಕ್ಷಕ್ಕೆ ಒಳಗಾಗಿ ಬಾಲಣ್ಣ ಮನೆಯಲ್ಲಿಯೇ ಉಳಿಯಬೇಕಾಯಿತು. ಇತ್ತ ಕುಟುಂಬದ ಜೀವನಕ್ಕೆ ಆಸರೆಯಾಗಿದ್ದ ವ್ಯಕ್ತಿ ಹಾಸಿಗೆ ಹಿಡಿಯುವಂತಾಯಿತು. ಕುಟುಂಬದ ನಿರ್ವಹಣೆ ದುಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ನಿರ್ಧಾರ ಬದಲಾಯಿಸಿದ ಬಾಲಣ್ಣ ತನ್ನ ಜಮೀನಿನಲ್ಲಿ ಕೃಷಿಯಲ್ಲಿ ಸಾಧನೆ ಮಾಡುವ ಹಂಬಲ ಮೂಡಿಸಿತು.

ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಬೋರ್ ವೆಲ್ ಕೊರೆಸಿ, ಭೂಮಿಯನ್ನು ಅಚ್ಚುಕಟ್ಟು ಮಾಡಿ ಕೃಷಿ ಚಟುವಟಿಕೆಗೆ ಬಾಲಣ್ಣ ಮುಂದಾದರು. ಕಳೆದ 15 ವರ್ಷದಿಂದ ಪತ್ನಿಯ ನೆರವಿನೊಂದಿಗೆ ಜಮೀನಿನಲ್ಲಿ ಮೊದ ಮೊದಲಿಗೆ ರಾಗಿ, ಸೌತೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆದರು. ಇದಾದ ನಂತರ ಇದೀಗ ಸುಮಾರು 500 ಅಡಿಕೆ ಗಿಡ, ತೆಂಗು, ಹತ್ತಿ, ರಾಗಿ ಮತ್ತು ಮೆಣಸಿನ ಗಿಡಗಳನ್ನು ನಾಟಿ ಮಾಡಿ ಬಾಲಣ್ಣ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಯಾರ ಮೇಲೂ ಅವಲಂಬಿತವಾಗದೇ ತಾನೇ ಅಡಿಕೆ ಗಿಡ ಕಳೆ ತೆಗೆಯುವುದು, ಮೆಣಸಿನ ಸಸಿಗೆ ನೀರು ಹಾಯಿಸುವುದು, ಹತ್ತಿ ಬಿಡಿಸುವುದು ಈಗೆ ಕೆಲಸಗಳನ್ನು ಮಾಡುತ್ತಾರೆ. ಈಗಾಗಲೇ ಅಡಿಕೆ ಗಿಡಗಳು ಫಸಲಿಗೆ ಬಂದಿದ್ದು ಉತ್ತಮ ಇಳುವರಿ ಪಡೆಯುತ್ತೇನೆ ಎಂಬ ನಂಬಿಕೆ ಬಾಲಣ್ಣ ಅವರಲ್ಲಿದೆ.
ತಮ್ಮ ಜೀವನದ ಬಗ್ಗೆ ಒನ್ ಇಂಡಿಯಾ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿರುವ ಬಾಲಣ್ಣ, 'ನನಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ನಾನು ಯಾರ ಬಳಿಯೂ ಸಹಾಯವಿಲ್ಲದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಯತ್ನದಿಂದ ನಾನು ಸಣ್ಣ ಮನೆಯನ್ನು ನಿರ್ಮಿಸಿಕೊಂಡಿದ್ದೇನೆ. ನನ್ನ ಜಮೀನಿನಲ್ಲಿ ಅಡಿಕೆ, ತೆಂಗು, ಹತ್ತಿ, ರಾಗಿ ಬೆಳೆಯಲಾಗುತ್ತಿದೆ. ಇದರಿಂದ ಜೀವನ ರೂಪಿಸಿಕೊಳ್ಳುತ್ತಿದ್ದೇನೆ. ಸರ್ಕಾರ ನಮ್ಮಂತ ಬಡ ರೈತರಿಗೆ ಪ್ರೋತ್ಸಾಹ ನೀಡಿದರೆ ಮತ್ತೊಷ್ಟು ಸಹಾಯ ಮಾಡಲಾಗುವುದು. ನನಗೆ ಪ್ರಮುಖವಾಗಿ ನನ್ನ ಜಮೀನಿಗೆ ದಾರಿ ಇಲ್ಲ. ದಾರಿ ವ್ಯವಸ್ಥೆ ಕಲ್ಪಿಸಿದರೆ ಸಾಕು ನನಗೆ ಬೇರೆ ಏನು ಬೇಡ' ಎನ್ನುತ್ತಾರೆ.

ಒಟ್ಟಾರೆಯಾಗಿ ಇಂತಹ ಬಡ ರೈತರು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ ರೈತರನ್ನು ಸರ್ಕಾರ ಗುರುತಿಸಬೇಕು. ಸರ್ಕಾರದಿಂದ ಕೃಷಿಯ ಪ್ರೋತ್ಸಾಹ, ತ್ರಿಚಕ್ರ ವಾಹನ, ಮನೆ ಸರ್ಕಾರದ ಸವಲತ್ತುಗಳನ್ನು ನೀಡಬೇಕು. ಎಲೆಮರೆ ಕಾಯಿಯಂತೆ ಇರುವ ರೈತರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ.












Click it and Unblock the Notifications