ಕಾಂಗ್ರೆಸ್‌ನ ಬಿಟ್ಟಿ ಗ್ಯಾರಂಟಿ ಕಾರ್ಡ್ ಯೋಜನೆಗಳಿಂದ ನಮಗೆ ಸೋಲು-ಪೂರ್ಣಿಮಾ ಶ್ರೀನಿವಾಸ್
ಚಿತ್ರದುರ್ಗ, ಮೇ 19: 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲಂತಹ ಸಂದರ್ಭದಲ್ಲಿ ಮತದಾರರು ನಮ್ಮನ್ನು ಕೈ ಹಿಡಿದಿದ್ದರು. ಕಳೆದ ಐದು ವರ್ಷಗಳಲ್ಲಿ ಶಾಶ್ವತವಾದ ಕೆಲಸಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸಿದ್ದರೂ ಮತದಾರರು ಕೈ ಹಿಡಿಯಲಿಲ್ಲ ಎಂಬುದು ಆಶ್ಚರ್ಯವಾಗಿದೆ ಎಂದು ಮಾಜಿ ಶಾಸಕಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಚಿತ್ರದುರ್ಗ ನಗರದ ಶ್ರೀ ತುಳಸಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಅಭ್ಯರ್ಥಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜಾರಿಗೆ ತಂದಿರುವ ಗ್ಯಾರಂಟಿ ಕಾರ್ಡ್ ಬಿಟ್ಟಿ ಯೋಜನೆಗಳಿಗೆ ಮತದಾರರು ತೀರ್ಪು ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತಾಲೂಕಿನಲ್ಲಿ ಆಸ್ಪತ್ರೆ ನಿರ್ಮಾಣ, ಬಸ್ ಡಿಪೋ, ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ, ನೀರಾವರಿ ಯೋಜನೆ ಸೇರಿದಂತೆ, ಅನೇಕ ಶಾಶ್ವತವಾದ ಕೆಲಸಗಳನ್ನು ನಮ್ಮ ಬಿಜೆಪಿ ಸರ್ಕಾರ ಹಾಗೂ ನಮ್ಮ ಪಕ್ಷದ ನಾಯಕರು ಮಾಡಿದ್ದಾರೆ ಮತದಾರರು ಮಾತ್ರ ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ನೋವು ಕಾಡಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳ ಆಡಳಿತದಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಜಾತಿವಾದಿಯಾಗಿ ಆಡಳಿತ ನಡೆಸಿಲ್ಲ, ನಾನು ಯಾವುದೇ ಜಾತಿ, ಧರ್ಮ ಜನಾಂಗ ನೋಡದೆ, ಬೇಧ-ಭಾವ ಮಾಡದೇ ಎಲ್ಲರನ್ನು ಸಮಾನಾಗಿ ಕಂಡಿದ್ದೇನೆ. ಡಿಪೋ, ಆಸ್ಪತ್ರೆ, ಕೆರೆಗೆ ನೀರು, ಮನೆ ಹಂಚಿಕೆ, ಹಕ್ಕು ಪತ್ರ ವಿತರಣೆ, ಚೆಕ್ ಡ್ಯಾಂ ನಿರ್ಮಾಣ ಇವೆಲ್ಲ ನನ್ನ ಜಾತಿಗೆ ಸೀಮಿತನಾ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಗೊಲ್ಲ ಸಮುದಾಯ ಬಹುಸಂಖ್ಯಾತರು ಇದ್ದಾರೆ ಎಂಬ ಕಾರಣಕ್ಕೆ, ನನ್ನನ್ನು ಜಾತಿ ವಾದಿ ಶಾಸಕಿ ಎಂದು ಕಾಮೆಂಟ್ ಮಾಡುವುದು ಸರಿಯಲ್ಲ. ನಾನು ಐದು ವರ್ಷಗಳಲ್ಲಿ ಯಾವುದಾದರೂ ಬ್ಯುಸಿನೆಸ್ ಮಾಡಿದಿವಾ?. ಯಾರಿಗಾದರೂ ತೊಂದರೆ ಮಾಡಿವಾ?. ಒಂದು ತುಂಡು ಭೂಮಿ ಖರೀದಿ ಮಾಡಿವಾ ಎಂದು ಮತದಾರರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು.

ನಮ್ಮ ಪಕ್ಷದಲ್ಲಿ ವೈಯಕ್ತಿಕ ಕೆಲಸ ಆಗದಿದ್ದಕ್ಕೆ ಹೊರಗಡೆ ನಮ್ಮನ್ನು ದೂಷಿಸಿದ್ದಾರೆ. ಇದರ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರು ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿಲ್ಲ. ನಮ್ಮ ಪಕ್ಷದ ನಾಯಕರ ನಿರ್ಧಾರಗಳು, ಬೆಲೆ ಏರಿಕೆ ಇತ್ಯಾದಿಗಳಿಂದ ನಮಗೆ ಸೋಲು ಉಂಟಾಗಿದೆ ಎಂದರು.
ವಿದ್ಯಾಬ್ಯಾಸ, ಮದುವೆ ಕಷ್ಟ ಸುಖ ಎಂದು ಬಂದವರನ್ನು 90ರಷ್ಷು ನಾನು ಯಾರನ್ನೂ ಬರಿಗೈಲಿ ವಾಪಸ್ ಕಳಿಸಿಲ್ಲ. ನಾನು ಪ್ರಾಮಾಣಿಕವಾಗಿ ಸಹಾಯ ಮಾಡಿದ್ದೇನೆ, ಉಳಿದ 10ರಷ್ಟು ನನ್ನ ಗಮನಕ್ಕೆ ಬಂದಿರುವುದಿಲ್ಲ ಅಥವಾ ನನ್ನ ಪೋನ್ ಕರೆಗೆ ಸಿಕ್ಕಿರುವುದಿಲ್ಲ . ಸರ್ಕಾರದ ಜೊತೆ ಗಲಾಟೆ ಮಾಡಿ, ಧರ್ಮಪುರ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದೆ. ಅನೇಕ ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಬೆಲೆ ಇಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.
ಸೋಲಿನಿಂದ ನೀವ್ಯಾರು ಧೃತಿಗೆಡಬೇಡಿ. ಯಾರು ಕೂಡ ನಮ್ಮ ಕಾರ್ಯಕರ್ತರನ್ನು ಮುಟ್ಟಲು ಬಿಡುವುದಿಲ್ಲ. ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ ಇದು ಪ್ರಜಾಪ್ರಭುತ್ವ. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ನೀವು ಧೈರ್ಯವಾಗಿ ಇರಿ. ನಾನು ಇನ್ನು ಮುಂದೆ ಸೌಮ್ಯವಾಗಿ ಇರುತ್ತೇನೆ ಅಂತಾ ಅಂದುಕೊಳ್ಳಬೇಡಿ. ನಾನು ಸೌಮ್ಯವಾಗಿ ಇದ್ದಿದ್ದಕ್ಕೆ ಚುನಾವಣೆಯಲ್ಲಿ ತೊಂದರೆ ಉಂಟಾಗಿದೆ. ಯಾರು ಸುಮ್ಮನೇ ದ್ವೇಷ ಕಟ್ಟಿಕೊಳ್ಳುವುದು ಬೇಡ, ನನಗೆ 62 ಸಾವಿರ ಜನ ಮತ ನೀಡಿದ್ದಾರೆ. ಅವರಿಗೆ ನಾನು ಬೇಕಿದೆ ಹಾಗಾಗಿ ಮತ ನೀಡಿದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕಾರ್ಯಕರ್ತರು ಚುನಾವಣೆ ಕುರಿತು ಯಾವುದೇ ವ್ಯಕ್ತಿ ಮತ್ತು ಪಕ್ಷದ ವಿರುದ್ಧ ಇಲ್ಲ ಸಲ್ಲದ ಕಾಮೆಂಟ್ ಮಾಡಬೇಡಿ. ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಘೋಷಿಸಿರುವ ಯೋಜನೆಗಳು ಜಾರಿಗೆ ಬರದಿದ್ದರೇ ನಾವು ವಿರೋಧ ಪಕ್ಷದವರಾಗಿ ಏನು ಮಾಡಬೇಕು ಅದನ್ನು ನಾವು ಮಾಡೋಣ. ಆ ಶಕ್ತಿ ನಮ್ಮ ಪಕ್ಷ ಮತ್ತು ನಮಗಿದೆ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.












Click it and Unblock the Notifications