Pocso case: ಜಾಮೀನಿನ ಮೇಲೆ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲೇ ಮುರುಘಾ ಶ್ರೀ ಬಂಧನ
ಚಿತ್ರದುರ್ಗ, ನವೆಂಬರ್, 20: ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ 14 ತಿಂಗಳ ಕಾಲ ಜೈಲು ಸೇರಿದ್ದ ಮುರುಘಾ ಶ್ರೀಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲೇ ಮತ್ತೆ ಬಂಧನವಾಗಿದೆ.
ದಾವಣಗೆರೆಯ ವಿರಕ್ತ ಮಠಕ್ಕೆ ಚಿತ್ರದುರ್ಗ ಪೊಲೀಸರು ಭೇಟಿ ನೀಡಿ ಶ್ರೀಗಳನ್ನು ಬಂಧಿಸಿದ್ದಾರೆ. ಚಿತ್ರದುರ್ಗಕ್ಕೆ ಶ್ರೀಗಳನ್ನು ಕರೆತರುತ್ತಿದ್ದು, ಕೆಲವೇ ಹೊತ್ತಿನಲ್ಲಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ನವೆಂಬರ್ 16ರಂದು ಪೋಕ್ಸೊ ಮೊದಲನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು. ಆದರೆ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯುವ ಮುನ್ನವೇ ಬಿಡುಗಡೆ ಆಗಿದ್ದ ಕಾರಣ, ಅವರನ್ನು ಇಂದು ಜಾಮೀನು ಪಡೆದ 4 ದಿನಗಳಲ್ಲೇ ಮತ್ತೆ ಬಂಧಿಸಲಾಗಿದೆ.
ಜಾಮೀನು ಮೇಲೆ ಬಿಡುಗಡೆಯಾಗಿ ದಾವಣಗೆರೆಯ ವಿರಕ್ತ ಮಠದಲ್ಲಿ ಶ್ರೀಗಳು ತಂಗಿದ್ದರು. ಆದರೆ ಇಂದು ಮತ್ತೆ ಪೋಲಿಸ್ ಶ್ರೀಗಳನ್ನು ಬಂಧಿಸಿ ಕರೆತರುತ್ತಿದ್ದಾರೆ.ಜಾಮೀನಿನ ಮೇಲೆ ಬಿಡುಗಡೆಗೊಂಡಿರುವಂತಹ ಮುರುಘಾ ಶ್ರೀಗಳು 2ನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಆದರೆ ಈ ಆದೇಶವನ್ನು ಪಾಲಿಸದೇ ವೀಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಗಳು ಹಾಜರಾಗಿದ್ದರು. ಇದನ್ನು ಸರ್ಕಾರಿ ವಕೀಲರು ಪ್ರಶ್ನಿಸಿದ್ದರು. ಜೊತೆಗೆ ಆದೇಶ ಉಲ್ಲಂಘನೆ ಸಂಬಂಧ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು.












Click it and Unblock the Notifications