ಪಕ್ಷ ತೊರೆಯಲು ನಿರ್ಧರಿಸಿದ್ದ ಎಂ.ಜಯಣ್ಣಗೆ ಜಿಲ್ಲಾಧ್ಯಕ್ಷರ ಸ್ಥಾನ: ಕೋಟೆನಾಡಿನಲ್ಲಿ ಜೆಡಿಎಸ್ ಹೊಸ ತಂತ್ರ
ಚಿತ್ರದುರ್ಗ, ಏಪ್ರಿಲ್ 21: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಕನಿಷ್ಠ ಪಕ್ಷ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲಲು ಜೆಡಿಎಸ್ ಪಟ್ಟುಹಿಡಿದಿದೆ.
ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಜೆಡಿಎಸ್ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿಲಾಜನಹಳ್ಳಿ ಎಂ. ಜಯಣ್ಣ ಅವರನ್ನು ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆದೇಶಿಸಿದ್ದಾರೆ.

'ಚಿತ್ರದುರ್ಗ ಜಿಲ್ಲಾ ಜನತಾದಳದ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ತಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲು ಆಶಿಸುತ್ತೇನೆ. ತಾವು ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ತನ್ನ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೀರಾ ಎಂದು ಆಶಿಸುತ್ತೇನೆ' ಎಂದು ಇಬ್ರಾಹಿಂ, ಎಂ. ಜಯಣ್ಣ ಅವರಿಗೆ ಆದೇಶ ಪ್ರತಿ ಮೂಲಕ ತಿಳಿಸಿದ್ದಾರೆ.
ಈ ಕುರಿತು ಒನ್ ಇಂಡಿಯಾ ಕನ್ನಡ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಎಂ. ಜಯಣ್ಣ 'ಪಕ್ಷ ನನ್ನನ್ನು ಗುರುತಿಸಿ ಹೊಸ ಜವಾಬ್ದಾರಿ ಕೊಟ್ಟಿದೆ. ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ. ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಇಲ್ಲ ಎನ್ನುತ್ತಿದ್ದವರಿಗೆ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಜನಸಾಗರ ಉತ್ತರ ನೀಡಿದೆ' ಎಂದರು.
ಈ ರಾಜ್ಯದಲ್ಲಿ ಉತ್ತಮ ಆಡಳಿತಕ್ಕಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕುಮಾರಣ್ಣ ಅವರು ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತಿರುವ ಮತದಾರರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ. ನನಗೆ ನೀಡಿರುವ ಹೊಸ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದು ನೂತನ ಅಧ್ಯಕ್ಷರು ಭರವಸೆ ವ್ಯಕ್ತಪಡಿಸಿದರು.
ಜೆಡಿಎಸ್ ತೊರೆಯಲು ನಿರ್ಧರಿಸಿದ್ದ ಎಂ. ಜಯಣ್ಣ
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಂ. ಜಯಣ್ಣ ಅವರು ಹಿರಿಯೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿ ಬಾರಿ ಪೈಪೋಟಿ ನಡೆಸಿದ್ದರು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಸಾರಿದ್ದರು. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಸಮುದಾಯದ ಮುಖಂಡರು ಹಾಗೂ ಜೆಡಿಎಸ್ ನಾಯಕರು ಎಂ. ಜಯಣ್ಣ ಮನೆಗೆ ತೆರಳಿ ಅವರನ್ನು ಮನವೊಲಿಸುವಲ್ಲಿ ಮುಖಂಡರು ಯಶಸ್ವಿಯಾಗಿದ್ದರು.
ಜಯಣ್ಣ ಬೆಂಬಲಿಗರು ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಅದರಂತೆ ಹಿಂದೆ ಇದ್ದ ಡಿ.ಯಶೋಧರ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಇದೀಗ ಎಂ. ಜಯಣ್ಣ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ನೀಡಲಾಗಿದೆ. ಹೀಗಾಗಿ 2023ರ ವಿಧಾನಸಭಾ ಚುನಾವಣೆಯನ್ನು ಜೆಡಿಎಸ್ ಯಾವ ರೀತಿ ಎದುರಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.
ಈ ಹಿಂದೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಡಿ. ಯಶೋಧರ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 40 ಸಾವಿರ ಮತಗಳನ್ನು ಪಡೆದು ಸೋಲುಕಂಡಿದ್ದರು.












Click it and Unblock the Notifications