ಚಿತ್ರದುರ್ಗದಲ್ಲಿ ಮತದಾನ ಆರಂಭ: ಬೆಳ್ಳಂಬೆಳಗ್ಗೆ ಮತಗಟ್ಟೆಯತ್ತ ಮತದಾರರ ದಂಡು
ಚಿತ್ರದುರ್ಗ, ಮೇ 10: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭಗೊಂಡಿದೆ. ಮತದಾನ ಆರಂಭವಾಗುತ್ತಿದ್ದಂತೆಯೇ ಮತದಾರರು ಉತ್ಸಾಹದಿಂದ ಮತದಾನ ಮಾಡಲು ಆಗಮಿಸುತ್ತಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1648 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಹೈ ಹೋಲ್ಟೇಜ್ ಕ್ಷೇತ್ರವಾಗಿದ್ದ ಹಿರಿಯೂರು ಕ್ಷೇತ್ರ ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್, ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್, ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರಪ್ಪ ಹಾಗೂ ಕೆಆರ್ಪಿಪಿ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್ ಮತ್ತು ಎಎಪಿ ಅಭ್ಯರ್ಥಿ ಕೆಟಿ ತಿಪ್ಪೇಸ್ವಾಮಿ ನಡುವೆ ಪೈಪೋಟಿ ಶುರುವಾಗಿದೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಎನ್ ವೈ ಗೋಪಾಲಕೃಷ್ಣ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ನಡುವೆ ಪೈಪೋಟಿ ಶುರುವಾಗಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಆಂಜನೇಯ ನಡುವೆ ನೇರ ಜಿದ್ದಾಜಿದ್ದಿ ನಡೆಯಲಿದೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಡಾ. ಜಯಸಿಂಹ ಲೋಕನಾಥ್ ಕೂಡ ಪೈಪೋಟಿ ನೀಡಲಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ಯಾಸಿನೊ ದೊರೆ ವೀರೇಂದ್ರ ಪಪ್ಪಿ ಹಾಗೂ ಬಿಜೆಪಿ ಅಭ್ಯರ್ಥಿ ಜಿ.ಹೆಚ್ ತಿಪ್ಪಾರೆಡ್ಡಿ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಇವರಿಬ್ಬರಿಗೆ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜಿ ಗೋವಿಂದಪ್ಪ, ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಹಾಗೂ ಮಂಜುನಾಥ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ಲಿಂಗಮೂರ್ತಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಇತ್ತ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ, ಬಿಜೆಪಿ ಅನಿಲ್ ಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ರವೀಶ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಕೂಡ ಅಖಾಡದಲ್ಲಿದ್ದಾರೆ.












Click it and Unblock the Notifications