ಕಾಂಗ್ರೆಸ್ ಭರವಸೆಗಳ ಬಗ್ಗೆ ಹಿರಿಯೂರು ಕ್ಷೇತ್ರದ ಅಧಿಪತಿ ಡಿ.ಸುಧಾಕರ್ ಹೇಳಿದ್ದೇನು?
ಚಿತ್ರದುರ್ಗ, ಮೇ, 13: ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಅವರು ಮಾತನಾಡಿ, ನನಗೆ ಸಚಿವ ಸ್ಥಾನ ನೀಡುವುದು ಪಕ್ಷ ಹಾಗೂ ಹೈಕಮಾಂಟ್‌ಗೆ ಬಿಟ್ಟ ವಿಚಾರವಾಗಿದೆ. ನಾನು ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ ಎಂದು ಹೇಳಿದರು. ಹಾಗೆಯೆ ಇದೇ ವೇಳೆಯಲ್ಲಿ ಅವರು ಕಾಂಗ್ರೆಸ್ ನೀಡಿದ ಭರವಸೆಗಳ ಬಗ್ಗೆಯೂ ವಿವರಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದೆ. ನನಗೆ ಸಚಿವ ಸ್ಥಾನ ನೀಡುವುದು ಪಕ್ಷ ತೀರ್ಮಾನಿಸಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಆಡಳಿತ ವಿರೋಧಿ ಅಲೆಯೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮೂಲೆ ಗುಂಪು ಮಾಡಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ 40% ಕಮಿಷನ್ ಇತ್ತು. ಅದರಲ್ಲಿ ಹಿರಿಯೂರು ಕೂಡ ಒಂದಾಗಿತ್ತು. ಯಾವ ಬಡವರಿಗೂ ಸಹ ಸಹಾಯ ಆಗಲಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಬೋರ್ ಇರಲಿಲ್ಲ. ಮನೆಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ಚುನಾವಣಾ ಫಲಿತಾಂಶ 2023 LIVE ಕ್ಷಣ ಕ್ಷಣದ ಮಾಹಿತಿ
ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ನಡೆಸಿ ಬಡವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ ಬಿಜೆಪಿಯನ್ನು ಜನತರು ಇದೀಗ ಮೂಲೆ ಗುಂಪು ಮಾಡಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಆಡಳಿತ ನಡೆಸಲಿದೆ. ರಾಜ್ಯದ ಜನತೆಗೆ ಐದು ಭರವಸೆಗಳ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇವುಗಳನ್ನು ಮೊದಲ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಎಲ್ಲಾ ವರ್ಗದ ಜನರನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ರಾಜ್ಯವನ್ನು ಅಭಿವೃದ್ಧಿಯನ್ನಾಗಿ ಪಡಿಸುತ್ತೇವೆ. ನನ್ನ ಕ್ಷೇತ್ರದ ಜನ ನನ್ನ ಗೆಲುವಿಗೆ ಎಲ್ಲ ವರ್ಗದ ಜನರು ಈ ಬಾರಿ ಆಶೀರ್ವಾದ ಮಾಡಿದ್ದರೆ ಎಂದರು.
ಇಂದಿನ ಶಾಸಕಿ ನನ್ನ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ನಾನು ರೌಡಿಸಂ ಮಾಡಲು ಸಣ್ಣ ಸಮುದಾಯದ ವ್ಯಕ್ತಿ. ನನ್ನ ಜನಾಂಗದಲ್ಲಿ ಇರುವುದು ಕೇವಲ 100 ಮತಗಳು, ಇದರಲ್ಲಿ ನಾನು ಯಾವತ್ತೂ ಸಹ ರೌಡಿಸಂ ಮಾಡಿಲ್ಲ, ಮಾಡುವುದು ಇಲ್ಲ. ನಾನು ಗಾಂಧೀಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.
ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು, ಅವರೇ ತಾಲೂಕಿನಲ್ಲಿ ಇಸ್ಪೀಟ್, ಜೂಜು ಆಟದಲ್ಲಿ ದಂಧೆ ಮಾಡುವ ಕಾರ್ಯಕ್ರಮಗಳನ್ನು ಜನರು ಕಣ್ಣಿನಿಂದ ನೋಡಿದ್ದಾರೆ. ನನಗೆ ಕ್ಷೇತ್ರದ ಅಭಿವೃದ್ಧಿಪಡಿಸುವುದೇ ಗುರಿಯಾಗಿದೆ ಎಂದರು.
ಜಯಭೇರಿ ಬಾರಿಸಿದ ಡಿ.ಸುಧಾಕರ್
ಚಿತ್ರದುರ್ಗ ಜಿಲ್ಲೆಯ ಹೋಲ್ಟೇಜ್ ಕ್ಷೇತ್ರವಾಗಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಭರ್ಜರಿ ಜಯಗಳಿಸಿದ್ದಾರೆ. ಈ ಮೂಲಕ ಹಿರಿಯೂರಿನ ಗದ್ದುಗೆ ಹಿಡಿದಿದ್ದ ಕೆ.ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪರಾಭವಗೊಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಸೋಲುಕಂಡಿದ್ದ ಡಿ.ಸುಧಾಕರ್ ಅವರು ಈ ಬಾರಿ ಚುನಾವಣೆಯಲ್ಲಿ 10 ಸಾವಿರ ಮತಗಳಿಂದ ಗೆಲುವು ಸಾಧಿಸಿ ಹಿರಿಯೂರಿನ ಅಧಿಪತಿಯಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಕಾಳಗ ನಡೆದಿದ್ದು, ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರು ಜೈ ಎಂದಿದ್ದಾರೆ.
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಡಿ.ಸುಧಾಕರ್, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ವಿರುದ್ಧ ಸುಮಾರು 12 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಹಾಗೆಯೆ ಕಳೆದ ಎರಡು ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಉತ್ತಮ ಒಡನಾಟ ಹೊಂದಿದ್ದು, ಜನರ ಕಷ್ಟ ಸುಖಗಳಿಗೆ ದನಿಯಾಗಿ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಚುನಾವಣೆಯ ಮತದಾನದವರೆಗೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಪ್ರವಾಸ ಕೈಗೊಂಡು ಪಟ್ಟಿದ್ದ ಶ್ರಮಕ್ಕೆ ಪ್ರತಿಫಲವನ್ನು ಪಡೆದುಕೊಂಡಿದ್ದಾರೆ.












Click it and Unblock the Notifications