Vani Vilasa Sagara: ವಾಣಿ ವಿಲಾಸ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಅಂಕಿಅಂಶ ತಿಳಿಯಿರಿ
ಚಿತ್ರದುರ್ಗ, ಜುಲೈ, 15: ಮುಂಗಾರು ಮಳೆ ಚುರುಕಾದ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಾಗಾದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯದ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಗಮನಿಸಿ.
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಜಲಾಶಯವು ಒಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಆರಂಭವಾಗಿ ಅರ್ಧ ಮಳೆಗಾಲ ಕಳೆದಿದ್ದರೂ ಅದ್ಯಾಕೋ ಈ ಬಾರಿ ಚೆಕ್ ಡ್ಯಾಂ, ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ತುಂಬುವಂತಹ ಮಳೆ ಬಂದಿಲ್ಲ. ಹಾಗಾದರೆ ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ..

ವಿವಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ
ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಪ್ರಸ್ತುತ ನೀರಿನ ಮಟ್ಟ ಸುಮಾರು 123 ಅಡಿ ಇದೆ. ಮೇಲ್ಭಾಗದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಮೂರ್ನಾಲ್ಕು ದಿನ ಜಲಾಶಯಕ್ಕೆ 250-300 ಕ್ಯೂಸೆಕ್ ನೀರು ಹರಿದು ಬಂದಿತ್ತು. ಈ ವರ್ಷದಲ್ಲಿ ಜಲಾಶಯಕ್ಕೆ ಹೇಳಿಕೊಳ್ಳುವಂತಹ ಒಳಹರಿವಿನ ಪ್ರಮಾಣ ದಾಖಲಾಗಿಲ್ಲ. 2022ರಲ್ಲಿ 135 ಅಡಿ ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಕೋಡಿ ಬಿದ್ದು ಮೈದುಂಬಿ ಹರಿದಿತ್ತು.
ಬಿತ್ತನೆ ಕಾರ್ಯ ಕುಂಠಿತ
ಇನ್ನು ಜಿಲ್ಲೆಯಲ್ಲಿ ಮಳೆ ಇಲ್ಲದೆ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಪರಿಣಾಮ ಈರುಳ್ಳಿ, ಶೇಂಗಾ, ತೊಗರಿ, ಮೆಕ್ಕೆಜೋಳ, ರಾಗಿ ಸೇರಿದಂತೆ ಮತ್ತಿತರರ ಬೆಳೆಗಳು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಹೊಲಗಳಲ್ಲಿ ಉಳುವೆ ಮಾಡಲು ರೈತರ ಜಮೀನಿಗಳು ಕೂಡ ಹಸನಾಗಿಲ್ಲ. ಆದ್ದರಿಂದ ಈ ವರ್ಷದಲ್ಲಿ ಬೆಳೆಗಳು ಬೆಳೆಯುವುದು ಹೇಗೆ ಎಂಬುದು ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದೆ.
ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದು ಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ124.50 ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು.
1907ರಲ್ಲಿ ಕಾಮಗಾರಿ ಪೂರ್ಣ
ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಲಾಗಿತ್ತು. 1907ರಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಿವಿ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
ಮತ್ತೊಂದು ಕಡೆ ಹಿರಿಯೂರು ತಾಲೂಕಿನ ಗಾಯಿತ್ರಿ ಜಲಾಶಯಕ್ಕೂ ಕೂಡ ಯಾವುದೇ ರೀತಿಯ ಒಳಹರಿವಿನ ಪ್ರಮಾಣ ನೀರು ಹರಿದು ಬಂದಿಲ್ಲ. ಉಳಿದಂತೆ ಜಿಲ್ಲೆಯ ಬಹುತೇಕ ಸಣ್ಣ ಸಣ್ಣ ಕೆರೆಗಳು ಹಾಗೂ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ಮತ್ತೊಂದು ಕಡೆ ಪ್ರತಿ ವರ್ಷ ಭದ್ರಾ ಮೇಲ್ದಂಡೆ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಎರಡು ಟಿಎಂಸಿ ನೀರು ಬರಬೇಕಿತ್ತು. ಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾದ ಕಾರಣ ವಿವಿ ಸಾಗರಕ್ಕೆ ನೀರು ಹರಿಸುವುದು ಇನ್ನೂ ಖಚಿತವಾಗಿಲ್ಲ.
ಜಲಾಶಯದಲ್ಲಿ ಬಾಕಿಯಿರುವ ನೀರು
30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಾಣಿ ವಿಲಾಸ ಜಲಾಶಯದಲ್ಲಿ 23 ಟಿಎಂಸಿ ನೀರು ಬಾಕಿ ಇದೆ. ಡ್ಯಾಂ ಕೋಡಿ ಬೀಳಲು 7 ಟಿಎಂಸಿ ನೀರು ಬರಬೇಕಿದೆ. ಇನ್ನು ಎರಡ್ಮೂರು ತಿಂಗಳು ಮಳೆಗಾಲ ಉಳಿದ್ದು, ಹೆಚ್ಚು ಮಳೆ ಬಂದು, ಜಲಾಶಯಕ್ಕೆ ನೀರುಹರಿದು ಬಂದರೆ ಡ್ಯಾಂ ಕೋಡಿ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.












Click it and Unblock the Notifications