Mylara lingeshwara: ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ಭವಿಷ್ಯ ನುಡಿದ ಮೈಲಾರಲಿಂಗೇಶ್ವರ ಕ್ಷೇತ್ರದ ಗೊರವಯ್ಯ
ಚಿತ್ರದುರ್ಗ ಮೇ 2: ಮೈಲಾರಲಿಂಗೇಶ್ವರ ಕ್ಷೇತ್ರದ ಗೊರವಯ್ಯ ಅವರು ಮುಂದಿನ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಮುಂದಿನ ಸಿಎಂ ಯಾರಾಗಲಿದ್ದಾರೆಂದು ಗೊರವಯ್ಯ ಇಂದು ಹೇಳಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ಗೊರವಯ್ಯ ರಾಜಕೀಯ ಭವಿಷ್ಯ ನುಡಿಯುವ ಮೂಲಕ ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆಗೆ ಆಗಮಿಸಿದ ಗೊರವಯ್ಯ, 'ಹೆಚ್‌ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗೇ ಆಗ್ತಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಗೆದ್ದು ಬರ್ತಾರೆ' ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ ಹೆಚ್‌ಡಿಕೆಗೆ ಮೈಲಾರಲಿಂಗೇಶ್ವರರ ಆಶೀರ್ವಾದ ಸಿಕ್ಕಿದೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ರಘು ಆಚಾರ್ ಸೇರ್ಪಡೆಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ಬೀಳಿಸುತ್ತೇವೆ. ಕಾಂಗ್ರೆಸ್‌ಗೆ ಸೋಲಿನ ಪಾಠ ಕಲಿಸಿಕೊಡುತ್ತೇವೆ ಎಂದು ಶಪತ ಕೂಡ ಆಚಾರ್ ಮಾಡಿದ್ದಾರೆ. ಇದೇ ಪ್ರಯತ್ನದಲ್ಲಿ ಇದ್ದ ರಘು ಆಚಾರ್‌ಗೆ ಸದ್ಯ ಗೊರವಯ್ಯ ನುಡಿದ ಭವಿಷ್ಯದಿಂದ ನೂರಾನೆ ಬಲ ಸಿಕ್ಕಂತಾಗಿದೆ.
ಕಳೆದ ಕೆಸಿ ವೀರೇಂದ್ರ ಅವರನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಈ ಬಾರಿ ರಘು ಆಚಾರ್ ಅವರನ್ನು ಕಣಕ್ಕೆ ಇಳಿಸಿದೆ. ಇವರು ಎರಡು ಬಾರಿ ಎಂಎಲ್‌ಸಿ ಆಗಿದ್ದವರು. ಚಿತ್ರದುರ್ಗ ಕ್ಷೇತ್ರದ ಪರಿಚಯ ಇವರಿಗೆ ಚೆನ್ನಾಗಿದೆ. ಗ್ರಾಪಂ ಸದಸ್ಯರ ಮೂಲಕ ಮತದಾರರನ್ನು ತಲುಪುವುದು ಸುಲಭ ಎಂಬ ಕಾರಣಕ್ಕೆ ಇವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆಸಿ ವೀರೇಂದ್ರ ಎರಡನೇ ಸ್ಥಾನ ಪಡೆದಿದ್ದರು. ಆದರೆ ಇವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ರಘು ಆಚಾರ್‌ಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿರೇಂದ್ರ ಪಪ್ಪಿ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಿ.ಎಚ್ ತಿಪ್ಪಾರೆಡ್ಡಿ ಜಯಭೇರಿ ಬಾರಿಸಿದ್ದರು. ಆದರೆ ಈ ಬಾರಿ ವೀರೇಂದ್ರ ಪಪ್ಪಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಬಿಜೆಪಿ ಜಿ.ಎಚ್ ತಿಪ್ಪಾರೆಡ್ಡಿಗೆ ಟಿಕೆಟ್ ನೀಡಿದೆ. ಹೀಗಾಗಿ ಪ್ರವಾಸಿ ತಾಣ ಕೋಟೆನಾಡು ಚಿತ್ರದುರ್ಗದಲ್ಲಿ ಈ ಬಾರಿ ಚುನಾವಣಾ ರಣಕಣ ಜೋರಾಗಿದ್ದು ಚಿತ್ರದುರ್ಗದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಜಿ.ಎಚ್ ತಿಪ್ಪಾರೆಡ್ಡಿ ಕಳೆದ ಚುನಾವಣೆಯಲ್ಲಿ ಪಕ್ಷೇತರ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಸತತ ಐದು ಬಾರಿ ಶಾಸಕರಾಗಿ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದ ಜಿ.ಎಚ್ ತಿಪ್ಪಾರೆಡ್ಡಿಗೆ ಸದ್ಯ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಗೆದ್ದು ಡಬಲ್ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿ ತಿಪ್ಪಾರೆಡ್ಡಿ ಇದ್ದಾರೆ. ಚಿತ್ರದುರ್ಗದಲ್ಲಿ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿದ್ದು, ಗೊರವಯ್ಯ ನುಡಿದ ಭವಿಷ್ಯ ಭಾರೀ ಕುತೂಹಲ ಮೂಡಿಸಿದೆ. ಹಾಗಾದರೆ ಗೊರವಯ್ಯ ನುಡಿದ ಭವಿಷ್ಯ ನಿಜವಾಗುತ್ತಾ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಈಗಾಗಲೇ ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಪೂರ್ಣಗೊಂಡಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಕೋಟೆ ನಾಡಿನಲ್ಲಿ ಈ ಬಾರಿ ಜಯ ಯಾರಿಗೆ ಎಂದು ಕಾದು ನೋಡಬೇಕಿದೆ.












Click it and Unblock the Notifications