ಮಗಳ ಮೇಲಿನ ಸಿಟ್ಟಿಗೆ ಮೇಕೆಗೆ ಸೀಮಂತ ಮಾಡಿದ ತಾಯಿ!
ಚಿತ್ರದುರ್ಗ, ಮಾರ್ಚ್ 10; ತಳಿರು ತೋರಣಗಳಿಂದ ಸಿಂಗಾರಗೊಂಡ ಮನೆ. ಹೆಣ್ಣು ಮಕ್ಕಳಂತೆ ಸೀರೆತೊಡಿಸಿ ಸಿಂಗರಿಸಿರೋ ಗರ್ಭಿಣಿ ಮೇಕೆ, ಮೇಕೆಗೆ ಮಡಿಲು ತುಂಬಿ ಶುಭ ಹಾರೈಸುತ್ತಿರುವ ಮಹಿಳೆಯರು.
ಈ ಸಂಭ್ರಮದ ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಗೀತಾರಾಜು ದಂಪತಿಗಳ ಮನೆಯಲ್ಲಿ. ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯ ಮಾಡುವುದು ನೋಡಿದ್ದೇವೆ.
ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳು ಪ್ರೀತಿಸಿದ ಹುಡುಗನ ಜೊತೆ ಓಡಿಹೋದ ಕಾರಣಕ್ಕೆ ತಾಯಿ ಮನೆಯಲ್ಲಿ ಬೆಳೆಸಿದ ಮೇಕೆಗೆ ಸೀಮಂತ ಕಾರ್ಯ ಮಾಡಿದ ವಿಶೇಷ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೇ ಮಗಳು ಯಾರನ್ನೋ ಪ್ರೀತಿಸಿ ಮನೆಯವರ ವಿರೋಧವನ್ನೂ ಲೆಕ್ಕಿಸದೇ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ಬೇಸರಗೊಂಡ ತಾಯಿ ಗೀತಾ ಮನೆಯಲ್ಲಿ ಸಾಕಿದ ಮೇಕೆಗೆ ಸೀಮಂತ ಮಾಡಿ ತಾಯಿ ಪ್ರೀತಿಯನ್ನ ಧಾರೆ ಎರೆದಿದ್ದಾರೆ.
ಮೂಲತಃ ಹಾಸನ ಜಿಲ್ಲೆಯವರಾದ ರಾಜು ಕಲಾವಿದರು. ಮೊದಲಿನಿಂದಲೂ ಗಿಡ ಮರಗಳನ್ನು ಬೆಳೆಸುವ, ಪ್ರಾಣಿಗಳನ್ನು ಸಾಕುವ ಹವ್ಯಾಸ ಹೊಂದಿದ್ದಾರೆ. ಎರಡನೇ ಮಗಳಿಗೂ ಕೂಡ ಪ್ರಾಣಿಗಳೆಂದರೆ ಪಂಚ ಪ್ರಾಣ.
ಮೊದಲ ಮಗಳಿಗೆ ಮಾಡಬೇಕಿದ್ದ ಸೀಮಂತ ಕಾರ್ಯವನ್ನು ಪ್ರೀತಿಯಿಂದ ಸಾಕಿದ ಮೇಕೆಗೆ ಮಾಡಿದ್ದಾರೆ. ಬಂಧು ಬಳಗವನ್ನು ಕರೆದು ಸಿಹಿ ಊಟ ಹಾಕಿಸಿದ್ದಾರೆ.
ಒಟ್ಟಾರೆ ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳು ತಂದೆ-ತಾಯಿಯ ಪ್ರೀತಿಯನ್ನು ಮರೆತು, ಪ್ರೇಮಿಯ ಜೊತೆ ಓಡಿಹೋದ ಕಾರಣ, ಮಗಳ ಮೇಲಿದ್ದ ಪ್ರೀತಿಯನ್ನು ಪ್ರಾಣಿಗಳಿಗೆ ಧಾರೆ ಎರೆಯುವ ಮೂಲಕ ಗೀತಾರಾಜು ಕುಟುಂಬ ನೆಮ್ಮದಿ ಕಂಡುಕೊಂಡಿದೆ.












Click it and Unblock the Notifications