ಚಿತ್ರದುರ್ಗ: ಮಂಗಳಮುಖಿ ಸಾಕಿದ್ದ 7 ಲಕ್ಷ ರೂ ಮೌಲ್ಯದ ಕುರಿ, ಮೇಕೆಗಳನ್ನು ಕದ್ದೊಯ್ದ ಕಳ್ಳರು
ಚಿತ್ರದುರ್ಗ, ಅಕ್ಟೋಬರ್ 27: ಇತ್ತೀಚಿನ ದಿನಗಳಲ್ಲಿ ಕೆಲವು ಮಂಗಳಮುಖಿಯರು ಭಿಕ್ಷೆ ಬೇಡಿ ಜೀವನ ಸಾಗಿಸುವ ಬದಲು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಸ್ವಾವಲಂಬಿ ಬದುಕು ಕಟ್ಟಿಕೊಂಡು ಮುಖ್ಯವಾಹಿನಿಗೆ ಬರಲು ನೆರವಾಗುತ್ತಿದ್ದ ಸಾಮಾಜಿಕ ಕಾರ್ಯಕರ್ತೆ, ಮಂಗಳಮುಖಿ ಅರುಂಧತಿ ಅವರಿಗೆ ಸೇರಿದ 43 ಮೇಕೆ ಹಾಗೂ 5 ಕುರಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಕೊಳಹಾಳ್ ಬಳಿ ಅರುಂಧತಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುರಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ಹೈನುಗಾರಿಕೆ, ಮೇಕೆ ಮತ್ತು ಕುರಿ ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಕುರಿ ಶೇಡ್‌ನಲ್ಲಿದ್ದ ಕುರಿಗಳನ್ನು ಯಾರೋ ಕಳ್ಳರು ಕದ್ದೊಯ್ದಿದ್ದು ಇದರಿಂದ ಮಂಗಳಮುಖಿ ಅರುಂಧತಿ ಕಂಗಾಲಾಗಿದ್ದಾರೆ.

ಭಿಕ್ಷೆ ಬೇಡುವ ವೃತ್ತಿಗಂಟಿದ ಕಳಂಕದಿಂದ ಹೊರಬಂದು ಸ್ವಾವಲಂಭಿ ಬದುಕು ಸಾಗಿಸಬೇಕೆನ್ನುವ ಹಂಬಲ ಹೊತ್ತಿದ್ದ ಮಂಗಳಮುಖಿ ಬದುಕಿನಲ್ಲಿ ಇದೊಂದು ಅನ್ಯಾಯದ ಘಟನೆ ನಡೆದಿದ್ದು, ಕಳ್ಳರು ಆಕೆಯ ಜೀವನಾಧಾರಕ್ಕೆ ಪೆಟ್ಟುಕೊಟ್ಟಿದ್ದಾರೆ. ಕಳ್ಳತನವಾಗಿರುವ ಕುರಿ ಮತ್ತು ಮೇಕೆಗಳ ಬೆಲೆ 7.55 ಲಕ್ಷ ರೂ.ಗಳೆಂದು ಅಂದಾಜು ಮಾಡಲಾಗಿದೆ.
ಬುಧವಾರ ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಮೇಯಿಸಿ ಅವುಗಳನ್ನು ಶೆಡ್‌ನಲ್ಲಿ ಕೂಡಿ, ಮೇವು ಹಾಕಿ ಸಂಘಟನೆಯ ಕೆಲಸದಲ್ಲಿ ಭಾಗಿಯಾಗಲು ಚಿಕ್ಕಮಗಳೂರಿಗೆ ಹೋಗಿದ್ದಾರೆ. ಜೊತೆಗಿದ್ದವರು ಬೆಳಗ್ಗೆ ಶೆಡ್‌ನತ್ತ ಕಣ್ಣು ಹಾಯಿಸಿದಾಗ ಅದರ ಬೀಗ ಒಡೆದು, ಸರಪಳಿ ಬಿಚ್ಚಿರುವುದನ್ನು ಕಂಡಿದ್ದಾರೆ. ಕೂಡಲೇ ಅರುಂಧತಿಗೆ ಫೋನ್ ಮೂಲಕ ವಿಷಯ ತಿಳಿಸುತ್ತಿದ್ದಂತೆ ಧಾವಿಸಿ ಮಧ್ಯಾಹ್ನದ ಹೊತ್ತಿಗೆ ಬಂದ ಅವರು, ಅಕ್ಕಪಕ್ಕದ ಜಮೀನುಗಳಲ್ಲಿ ಪ್ರಾಣಿಗಳಿಗೆ ತಡಕಾಡಿದ್ದಾರೆ. ಎಲ್ಲಿಯೂ ತನ್ನ ಸಾಕು ಪ್ರಾಣಿಗಳು ಕಾಣದೇ ಇದ್ದಾಗ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಸಮಾಜಸೇವಕಿ ಆರುಂಧತಿ
ಮಂಗಳಮುಖಿಯರು ಎಂದಾಕ್ಷಣ ವಿಲಕ್ಷಣ ಬದುಕಿನ ಪ್ರತಿನಿಧಿಗಳು ಎಂಬಂತೆ ನೋಡಲಾಗುತ್ತದೆ. ಆದರೆ ಅರುಂಧತಿ ದೂರದ ಮಂಡ್ಯ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಬಂದು ಕೊಳಹಾಳ್ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸಮಾಜದ ಮುಖ್ಯ ವಾಹಿನಿಗೆ ಬಂದು ಬದುಕು ಸಾಗಿಸಲು ಇಷ್ಟಪಡುವ ಇನ್ನಿತರೆ ಮಂಗಳಮುಖಿಯರಿಗೆ ತನ್ನಲ್ಲಿರುವ ಮೇಕೆ ಮತ್ತು ಕುರಿಗಳಲ್ಲಿ ತಲಾ ಎರಡೆರಡನ್ನು ಕೊಡುಗೆಯಾಗಿ ನೀಡಿ ಆಸರೆ ಆಗುತ್ತಿದ್ದಾರೆ ಕೊರೊನಾ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ಶುದ್ಧ ಕುಡಿಯುವ ನೀರಿನ ವಿತರಣೆ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲಾಡಳಿತ ಕಳೆದ ಬಾರಿಯ ರಾಜ್ಯೋತ್ಸವ ಗೌರವ ನೀಡಿ ಸತ್ಕರಿಸಿತ್ತು.












Click it and Unblock the Notifications