ಚಿತ್ರದುರ್ಗ: ತಾಳಿ ಕಟ್ಟುವ ವೇಳೆ ಮದುವೆ ಒಲ್ಲೆ ಎಂದ ಮದುಮಗಳು
ಚಿತ್ರದುರ್ಗ, ಡಿಸೆಂಬರ್, 08: ಹಸೆಮಣೆ ಏರಿ ತಾಳಿ ಕಟ್ಟುವ ವೇಳೆ ಮದುವೆಗಳು ತಾಳಿ ಕಟ್ಟಿಸಿಕೊಳ್ಳುವುದನ್ನು ನಿರಾಕರಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುಮಗ ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮದುಮಗಳು ನನಗೆ ಮದುವೆ ಬೇಡ ಎಂದಿದ್ದಾಳೆ. ಇದರಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿರುವ ಮದುವೆ ರದ್ದಾಗಿದೆ.

ಆರತಕ್ಷತೆ ಸೇರಿದಂತೆ ಮದುವೆ ಎಲ್ಲಾ ಶಾಸ್ತ್ರಗಳು ಮುಗಿದು ತಾಳಿ ಕಟ್ಟುವ ಸಮಯದಲ್ಲಿ ಈ ಘಟನೆ ನಡೆದಿದೆ. ಮದುಮಗ ಇನ್ನೇನು ಮುಹೂರ್ತಕ್ಕೆ ಸಮಯ ಆಗಿದೆ, ತಾಳಿ ಕಟ್ಟು ಅಂತಾ ತಿಳಿಸಿದಾಗ, ತಾಳಿ ಕೈಯ್ಯಲ್ಲಿ ಹಿಡಿದುಕೊಂಡು ವಧು ಕುತ್ತಿಗೆಗೆ ಕಟ್ಟೋದಕ್ಕೆ ಮುಂದಾಗಿದ್ದಾನೆ. ವರ ಮುಂದೆ ತಂದಂತ ತಾಳಿಯನ್ನು ವಧು ಕೈ ಅಡ್ಡ ಹಿಡಿದು ಬೇಡ ಎಂಬುದಾಗಿ ತಿಳಿಸಿದ್ದಾಳೆ.
ಸಂಬಂಧಿಕರು ಯಾಕಮ್ಮ ಹೀಗೆ ಮಾಡ್ತಿದ್ದೀಯ ಅಂತಾ ಕೇಳಿದಾಗ ನನಗೆ ಮದುವೆ ಇಷ್ಟವಿಲ್ಲ. ಈ ಮದುವೆ ಬೇಡ ಎಂಬುದಾಗಿ ವಧು ನಿರಾಕರಿಸಿದ್ದಾಳೆ. ಆಕೆಯನ್ನು ಕುಟುಂಬಸ್ಥರು ಎಷ್ಟೇ ಮನವೊಲಿಕೆಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಮದುವೆ ರದ್ದುಗೊಂಡಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ದಿಕ್ಕು ತೋಚದಂತೆ ವಾಪಸ್ ತೆರಳಿದ್ದಾರೆ. ಇನ್ನು ಪ್ರಕರಣ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ
ಕಳೆದ ತಿಂಗಳು ದೀಪಾವಳಿ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಸುಮಾರು 100ಕ್ಕೂ ಅಧಿಕ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗಿದ್ದರು.
ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ ಸುಮಾರು 4 ದಿನಗಳ ಕಾಲ 160 ಕಿ.ಮೀ ಪಾದಯಾತ್ರೆಯನ್ನು ಯುವಕರು ಆರಂಭಿಸಿದ್ದರು. ಈ ತಂಡ ಹಿಂದಿನಿಂದ ಬೆಳೆದು ಬಂದ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಹೆಣ್ಣು ಸಿಗದೆ ಮದುವೆ ಆಗದ ಕಾರಣ ಪಾದಯಾತ್ರೆ ಮಾಡುವ ಮೂಲಕ ಮಧು ಸಿಗಲೆಂದು ಮಾದಪ್ಪನ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ಪಾದಯಾತ್ರೆ ಹೊರಟ ಯುವಕರು ಮಾತನಾಡಿ, ಪ್ರಸ್ತುತ ಬರಗಾಲ ಇರುವ ಹಿನ್ನೆಲೆಯಲ್ಲಿ ಇದನ್ನು ಹೋಗಲಾಡಿಸಲು ನಾಡಿಗೆ ಉತ್ತಮ ಮಳೆ ಬೆಳೆಯಾಗಿ, ರೋಗ ರುಜಿನ ಬರದೆ ಆರೋಗ್ಯಕರವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಲು ಪಾದಯಾತ್ರೆ ಹೊರಡಲಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳ ಮದುವೆಗೆ ಹೆಣ್ಣು ಕೊಡಲು ಸಮಾಜವು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಹೆಣ್ಣು ಸಿಗಲೆಂದು ಮಾದಪ್ಪನ ಬಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.
ಪಾದಯಾತ್ರೆಯಲ್ಲಿ ಕೋಡಹಳ್ಳಿ ಗ್ರಾಮದ ಯುವಕರಾದ ಜವರ, ಮಹೇಶ್, ಮಹದೇವ, ಕೆಂಪ, ನಿಲೇಶ್, ಸ್ವಾಮಿ, ಸಿದ್ದರಾಜು, ಕೃಷ್ಣ, ಮಾಧು, ಕುಮಾರ, ಪ್ರಸಾದ್ ಸೇರಿದಂತೆ 100ಕ್ಕೂ ಅಧಿಕ ನೀಲಗಾರರು ಹಾಗೂ ಮಹದೇಶ್ವರ ಗುಡ್ಡರು ಭಾಗವಹಿಸಿದ್ದರು.












Click it and Unblock the Notifications