ಭದ್ರಾ ಯೋಜನೆ ಮುಗಿಯುವ ಮುನ್ನವೇ ಕುಸಿದ ನಾಲೆ ತಡೆಗೋಡೆ
ಚಿತ್ರದುರ್ಗ, ಆಗಸ್ಟ್ 17: ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಅಭದ್ರತೆ ಕಂಡುಬಂದಿದೆ.
ಕಾಮಗಾರಿಯು ಪೂರ್ಣಗೊಳ್ಳುವ ಮೊದಲೇ ತರೀಕೆರೆ ತಾಲೂಕಿನ ಹಳಿಯೂರು ಸಮೀಪದಲ್ಲಿ ನಾಲೆ ತಡೆಗೋಡೆ ಕುಸಿದಿದ್ದು, ಕಳಪೆ ಕಾಮಗಾರಿ ನಡೆದಿದೆಯೆಂದು ರೈತರು ಆರೋಪಿಸಿದ್ದಾರೆ.
ಸುಮಾರು 18 ಸಾವಿರ ಕೋಟಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಆರಂಭಗೊಂಡು ಸುಮಾರು ಹತ್ತು ವರ್ಷಗಳು ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಆದರೂ ರೈತರಿಗೆ ಇದರ ಬಗ್ಗೆ ಬಹು ನಿರೀಕ್ಷೆಗಳಿವೆ. ಆದರೆ ನಾಲೆ ತಡೆಗೋಡೆ ಕುಸಿದಿರುವುದರಿಂದ ಇದರ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಕಾಮಗಾರಿಯ ಭದ್ರಾ ನಾಲೆ ಸುಮಾರು 45 ಅಡಿಗಳಷ್ಟು ಉದ್ದವಿದ್ದು, 25 ಅಡಿಗಳ ವಿಸ್ತೀರ್ಣದಲ್ಲಿ ಈ ತಡೆಗೋಡೆ ಕುಸಿದಿದೆ. ಆದ್ದರಿಂದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾ, ತಡೆಗೋಡೆ ನಿರ್ಮಿಸಲು ಗುಣಮಟ್ಟದ ಕಾಂಕ್ರಿಟ್ ಬಳಸದೇ ಇರುವುದರಿಂದ ಗೋಡೆ ಕಿತ್ತು ಬಂದಿದೆ ಎಂದು ರೈತರು ಆರೋಪಿಸಿದ್ದಾರೆ.
ಇತ್ತೀಚಿಗೆ ಚಿಕ್ಕಮಗಳೂರು ಭಾಗದಲ್ಲಿ ಒಂದಿಷ್ಟು ಮಳೆಯಾಗುತ್ತಿದ್ದು, ಇದನ್ನೇ ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ನೀರು ಹರಿಸಲು ಭದ್ರಾ ಅಧಿಕಾರಿಗಳು ವಿಫಲವಾಗಿದ್ದಾರೆಂದು ಚಿತ್ರದುರ್ಗ ಭಾಗದ ರೈತರ ಆರೋಪಿಸಿದ್ದಾರೆ.












Click it and Unblock the Notifications