ಜೂನ್ 8ರ ನಂತರವೂ ತೆರೆಯಲ್ಲ ಚಿಕ್ಕಮಗಳೂರಿನ ಈ ಎರಡು ದೇವಾಲಯಗಳು
ಚಿಕ್ಕಮಗಳೂರು, ಜೂನ್ 06: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ದೇವಾಲಯಗಳು ಜೂನ್ 8ರಿಂದ ತೆರೆಯಲಿವೆ. ಖಾಸಗಿ ಮತ್ತು ಹಿಂದೂ ಧಾರ್ಮಿಕ ದತ್ತಿ ವ್ಯಾಪ್ತಿಯ ದೇವಾಲಯಗಳು ಸೋಮವಾರದಿಂದ ತೆರೆಯುತ್ತವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ತಿಳಿಸಿದ್ದಾರೆ.
ಆದರೆ ಸದ್ಯಕ್ಕೆ ಶೃಂಗೇರಿ ಶಾರದಾಂಬೆ ಹಾಗೂ ಮೂಡಿಗೆರೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ದೇಗುಲಗಳನ್ನು ತೆರೆಯುವ ಸೂಚನೆ ಇಲ್ಲ. ನಿನ್ನೆಯಷ್ಟೆ, ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 8ರ ನಂತರವೂ ದೇವಾಲಯವನ್ನು ತೆರೆಯುವುದಿಲ್ಲ, ಕೆಲವೊಂದು ಧಾರ್ಮಿಕ ಕೈಂಕರ್ಯಗಳಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ದೇವಾಲಯ ತೆರೆಯುವುದಿಲ್ಲ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ಭಕ್ತರಿಗೆ ಮಹತ್ವದ ಪ್ರಕಟಣೆ
ಇಂದು ಶೃಂಗೇರಿ ಶಾರದಾಂಬೆಯ ದೇವಸ್ಥಾನವನ್ನೂ ತೆರೆಯುವುದಿಲ್ಲ ಎಂದು ತಿಳಿದುಬಂದಿದೆ. ಶೃಂಗೇರಿಗೆ ಕೇರಳ, ತಮಿಳುನಾಡು, ಆಂಧ್ರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಆಗ ಭಕ್ತರ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ. ಹಾಗಾಗಿ, ದೇವಾಲಯ ತೆರೆಯುವುದಿಲ್ಲ ಎಂದು ಶೃಂಗೇರಿ ಶಾರದಾಂಬೆ ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ. ಜಿಲ್ಲೆಯ ಎರಡು ಪ್ರಮುಖ ದೇವಾಲಯಗಳು ಸದ್ಯಕ್ಕೆ ತೆರೆಯದೇ, ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿವೆ.