ಕಾಂಗ್ರೆಸ್‌ನಿಂದ ರಸೂಲ್ ಖಾನ್ ಉಚ್ಛಾಟನೆ: ಎಸ್‍ಡಿಪಿಐ ಮುಖಂಡನ ಸಂಬಂಧಿಕನಿಂದಲೇ ಆಡಿಯೋ ವೈರಲ್
ಚಿಕ್ಕಮಗಳೂರು, ಏಪ್ರಿಲ್ 08: ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ರಸೂಲ್‍ಖಾನ್ ಅವರೊಂದಿಗೆ ತಾನು ಆತ್ಮೀಯತೆಯಿಂದ ಮಾತನಾಡಿದ ಮೊಬೈಲ್ ಸಂಭಾಷಣೆಯ ಆಡಿಯೋವನ್ನು ತನ್ನ ಸಂಬಂಧಿಯೊಬ್ಬರು ವೈರಲ್ ಮಾಡಿದ್ದಾರೆ ಎಂದು ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾಗಿದ್ದ ರಸೂಲ್‍ಖಾನ್ ಅವರೊಂದಿನ ಆಡಿಯೋ ವೈರಲ್ ಆದ ಬಗ್ಗೆ ಸ್ಪಷ್ಟನೆ ನೀಡಿದ ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ದಂಟರಮಕ್ಕಿ ಶ್ರೀನಿವಾಸ್, ಆ ಆಡಿಯೋದಲ್ಲಿಕಾಂಗ್ರೆಸ್‌ಗೆ ಅನುಕೂಲವಾಗುವಂತಹ ಸಂಭಾಷಣೆಯನ್ನು ಮಾತ್ರ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ರಸೂಲ್‍ಖಾನ್ ಹಾಗೂ ತಾನು ಆತ್ಮೀಯ ಸ್ನೇಹಿತರಾಗಿದ್ದು, ಎಚ್.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರದಲ್ಲಿ ಏರ್ಪಟ್ಟಿದ್ದ ಗೊಂದಲದ ಬಗ್ಗೆ ತಾನು ಏಪ್ರಿಲ್ 1ರಂದು ಮೊಬೈಲ್ ಕರೆ ಮಾಡಿ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದೆ. ಮಾತುಕತೆ ವೇಳೆ ಕಾಂಗ್ರೆಸ್ ಪಕ್ಷದಲ್ಲಿರುವ ಒಡಕಿನ ಬಗ್ಗೆ ಮಾತನಾಡಿದ್ದರು. ಅವರೊಂದಿಗೆ ಮಾತನಾಡಿದ್ದ ಆಡಿಯೋ ಸಂಭಾಷಣೆ ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಆಗಿತ್ತು ಎಂದರು.
ಕಾಂಗ್ರೆಸ್ ಪಕ್ಷದಲ್ಲಿನ ಒಡಕಿನ ಬಗ್ಗೆ ತಾನು ಹಿರೇಮಗಳೂರು ಜಗದೀಶ್ ಎಂಬವರೊಂದಿಗೆ ಚರ್ಚಿಸಿದ್ದು, ಅವರು ನನ್ನ ಸಂಬಂಧಿಯೂ ಆಗಿದ್ದರಿಂದ ರಸೂಲ್‍ಖಾನ್ ಮಾತನಾಡಿದ್ದ ಆಡಿಯೋ ಕೇಳಿಸಿದ್ದೆ. ಆಡಿಯೋ ಆಲಿಸುತ್ತಲೇ ಅವರು ಆಡಿಯೊ ಕ್ಲಿಪ್‍ಅನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡು ಅದನ್ನು ಕಾಂಗ್ರೆಸ್ ಮುಖಂಡರಿಗೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ಆಡಿಯೋದಲ್ಲಿದ್ದ ಸಂಭಾಷಣೆಯ ಪೈಕಿ ತಮಗೆ ಅನುಕೂಲವಾಗುವ ಸಂಭಾಷಣೆಯನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ದೂರಿದರು.
ಎಡಿಟ್ ಮಾಡಿದ ಆಡಿಯೋ ಕ್ಲಿಪ್‍ಅನ್ನು ಕೆಪಿಸಿಸಿ ಮುಖಂಡರಿಗೆ ನನ್ನ ಒಪ್ಪಿಗೆ ಇಲ್ಲದೇ ಕಳುಹಿಸಿದ್ದಾರೆ. ಪರಿಣಾಮ ರಸೂಲ್‍ಖಾನ್ ವಿರುದ್ಧ ಪಕ್ಷದ ವರಿಷ್ಠರು ಶಿಸ್ತುಕ್ರಮ ಜರುಗಿಸಿದ್ದಾರೆ ಎಂದ ಅವರು, ನನ್ನ ಮೊಬೈಲ್‌ನಲ್ಲಿರುವ ಆಡಿಯೋ ಕದ್ದಿರುವುದಲ್ಲದೇ ಅದನ್ನು ವೈರಲ್ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಜಗದೀಶ್ ಕೂಡಲೇ ಕ್ಷಮೆಯಾಚನೆ ಮಾಡಬೇಕು. ತಪ್ಪಿದಲ್ಲಿ ಕಾನೂನು ಸಲಹೆ ಪಡೆದು ದೂರು ದಾಖಲಿಸಲಾಗುವುದು ಎಂದು ಶ್ರೀನಿವಾಸ್ ಎಚ್ಚರಿಸಿದರು.

ಆಡಿಯೋ ಸಂಭಾಷಣೆ ವೈರಲ್ ಮಾಡಿರುವುದರಿಂದಾಗಿ ಎಸ್‍ಡಿಪಿಐ ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಇದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಯನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಣಕ್ಕಿಳಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಸ್‍ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚರ್ಚಿಸಲಾಗುತ್ತಿದ್ದು, ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಶೀಘ್ರ ಕ್ರಮವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಗೌಸ್‍ಮುನೀರ್, ಮುಖಂಡರಾದ ಅಜ್ಮತ್‍ಪಾಶ, ಶಂಶುದ್ದೀನ್ ಹಾಗೂ ಸೈಯದ್ ಇಮ್ರಾನ್ ಉಪಸ್ಥಿತರಿದ್ದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಸೂಲ್ ಖಾನ್ ಕಾಂಗ್ರೆಸ್‌ನಿಂದ ಉಚ್ಛಾಟನೆ
ಫೋನ್ ಕರೆಯಲ್ಲಿ ಮಾತನಾಡುವಾಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ.ರವಿಯೇ ಗೆಲ್ಲುವುದು ಎಂದು ಹೇಳಿದ್ದಾರೆ ಎನ್ನುವ ಆರೋಪದ ಮೇಲೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಸೂಲ್ ಖಾನ್‌ನನ್ನು ಕಾಂಗ್ರೆಸ್ ಪಕ್ಷದಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ನಿನ್ನ ಮೊನ್ನೆ ಪಕ್ಷಕ್ಕೆ ಸೇರಿಕೊಂಡಿರುವ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ತಮ್ಮಯ್ಯ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ್ದರು. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯೇ ಗೆಲ್ಲುವುದು ಎಂದು ರಸೂಲ್ ಖಾನ್ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು.












Click it and Unblock the Notifications