ಹಿಟ್&ರನ್: 3 ದಿನವಾದರೂ ತಿರುಗಿ ನೋಡಿಲ್ಲ, ನಟ ಚಂದ್ರಪ್ರಭಾ ವಿರುದ್ಧ ಗಾಯಾಳು ಪೋಷಕರ ಆಕ್ರೋಶ
ಚಿಕ್ಕಮಗಳೂರು, ಸೆಪ್ಟೆಂಬರ್ 06: ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದ ಬಳಿದ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಸ್ಪರ್ಧಿ ಚಂದ್ರಪ್ರಭಾ ಅವರ ಹೆಸರು ಕೇಳಿ ಬಂದಿದೆ. ಘಟನೆಯಲ್ಲಿ ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಗಂಭೀರ ಗಾಯಗೊಂಡಿದ್ದಾರೆ.
ಮಾಲ್ತೇಶ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದ ವೇಳೆ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಕಾರು ಚಂದ್ರಪ್ರಭಾ ಅವರಿಗೆ ಸೇರಿದ್ದಾಗಿದ್ದು, ಅಪಘಾತವೆಸಗಿದ ನಟ ಚಂದ್ರಪ್ರಭಾ ವಿರುದ್ಧ ಮಾಲ್ತೇಶ್ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲ್ತೇಶ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವಾಗಿ ಮೂರು ದಿನವಾದರೂ ತಿರುಗಿ ನೋಡಿಲ್ಲ. ನಮ್ಮ ಕುಟುಂಬಕ್ಕೆ ನಮ್ಮ ಮಗನೇ ಆಧಾರವಾಗಿದ್ದ. ಈಗ ಅವನು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲಿ ಗಾಯಾಳು ಮಾಲ್ತೇಶ್ ಅಣ್ಣ ರಘು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ತಮ್ಮನಿಗೆ ಕುಡಿಯುವ ಅಭ್ಯಾಸವೇ ಇಲ್ಲ. ಅವನ್ಯಾರೋ ಗೊತ್ತಿಲ್ಲ, ಚಂದ್ರಪ್ರಭಾನೇ ಕುಡಿದು ಗಾಡಿ ಓಡಿಸಿರಬಹುದು. ಆಸ್ಪತ್ರೆಗೆ ಸೇರಿಸಿದ್ದರೆ ನಾವು ಬರುವ ತನಕ ಇರಬಹುದಿತ್ತು, ಏಕೆ ಓಡಿಹೋದರು. ಆಸ್ಪತ್ರೆಗೆ ಸೇರಿಸಿದ್ದು ಅವರಲ್ಲ, ಸ್ಥಳೀಯರು ನನ್ನ ತಮ್ಮ ಕುಡಿಯುವುದೇ ಇಲ್ಲ, ಕುಡಿತದ ಅಭ್ಯಾಸವೇ ಅವನಿಗಿಲ್ಲ. ಚಂದ್ರಪ್ರಭಾ ಅವರೇ ರಸ್ತೆ ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಕಾರು ನಿಲ್ಲಿಸದೆ ಇಲ್ಲಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಟ ಚಂದ್ರಪ್ರಭಾ ಹೇಳಿದ್ದೇನು..?
ಇನ್ನು ತಮ್ಮ ಮೇಲಿನ ಹಿಟ್ ಆ್ಯಂಡ್ ರನ್ ಪ್ರಕರಣದ ಬಗ್ಗೆ ನಟ ಚಂದ್ರಪ್ರಭಾ ಮಾತನಾಡಿದ್ದು, ಇಲ್ಲಿ ನನ್ನ ತಪ್ಪಿಲ್ಲ. ಬೈಕ್‌ನ ಚಾಲಕನೇ ಹಿಂಬದಿಯಿಂದ ಕಾರಿಗೆ ಗುದ್ದಿದ್ದಾರೆ. ನಾವು ಕಾರು ನಿಲ್ಲಿಸಿ ಆಟೋಗೆ ಕೂರಿಸಿ ಕಾರ್ಯಕ್ರಮ ಇದ್ದ ಕಾರಣ ಬಂದಿದ್ದೇವೆ. ನಾನೇ ಕಾರು ಚಲಾಯಿಸುತ್ತಿದ್ದೆ ಎನ್ನುವ ವಿಚಾರವನ್ನು ಪೊಲೀಸರಿಗೂ ಹೇಳಿದ್ದೆ. ಅವರಿಗೆ ತಿಳಿಸಿ ನಂತರ ಹೊರಟಿದ್ದೆ. ನಾಳೆ ಅಥವಾ ನಾಡಿದ್ದು ಚಿಕ್ಕಮಗಳೂರು ಸಂಚಾರ ಠಾಣೆಗೆ ಬಂದು ಮಾಹಿತಿ ನೀಡುತ್ತೇನೆ. ಶೂಟಿಂಗ್‌ನಲ್ಲಿರುವ ಕಾರಣ ಎರಡು ದಿನ ಆದ ಮೇಲೆ ಬರುತ್ತೇನೆ ಎಂದು ಅಂತಾ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಹೇಳಿದರು.












Click it and Unblock the Notifications