ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್: ಚಾರ್ಮಾಡಿ ಘಾಟ್‌ನಲ್ಲಿ ಪೊಲೀಸರ ನಿಯೋಜನೆ
ಚಿಕ್ಕಮಗಳೂರು, ಆಗಸ್ಟ್ 02: ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಬರುವವರು ಅಪಾಯ ಸ್ಥಳಗಳಲ್ಲಿ ಸೂಚನೆಗಳನ್ನು ಲೆಕ್ಕಿಸದೇ ಹುಚ್ಚಾಟ ಮೆರೆಯುತ್ತಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಮೂಡಿಗೆರೆಯ ಚಾರ್ಮಾಡಿ ಘಾಟ್ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಭಾರೀ ಮಳೆಯಾಗಿದ್ದು, ಚಾರ್ಮಾಡಿ ಘಾಟ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ನೀರು ಹರಿದು ಜಲಪಾತ ಸೃಷ್ಟಿಯಾಗಿದೆ. ಹೀಗಾಗಿ ಜಿಲ್ಲೆಗೆ ಪ್ರವಾಸ ಬರುವವರು ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿದು ಕುಪ್ಪಳಿಸುತ್ತಿದ್ದರು. ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು. ಅಲ್ಲದೇ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು.

ಇದರಿಂದ ಮೂಡಿಗೆರೆಯ ಚಾರ್ಮಾಡಿ ಘಾಟ್ ಸಮೀಪದಲ್ಲಿ ಚಲಿಸಲು ಸಾರಿಗೆ ಬಸ್‌ಗಳು ಸೇರಿದಂತೆ ಇತರ ವಾಹನಗಳ ಸವಾರರು ಪರಡಾಡಬೇಕಿತ್ತು. ಈ ಹಿಂದೆ ಪ್ರವಾಸಿಗರ ಹುಚ್ಚಾಟದಿಂದ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಪರದಾಡಿತ್ತು. ಇನ್ನು ಅಪಾಯದ ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಹೀಗಾಗಿ ಇದೀಗ ಜಲಪಾತಗಳ ಬಳಿಕ ಹೈವೆ ಪ್ಯಾಟ್ರೋಲ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸರು ದಿನ ಪೂರ್ತಿ ಜಲಪಾತದಂತಹ ಸ್ಥಳದಲ್ಲೇ ಮೊಕ್ಕಾಂ ಹೂಡಿಲಿದ್ದು, ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಲಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಜಲಪಾತ
ಕಳೆದ ಹದಿನೈದು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಬ್ಬರಿಸಿದ್ದ ವರುಣ ಇದೀಗ ಕೊಂಚ ಬಿಡುವು ನೀಡಿದ್ದಾನೆ. ಆದರೆ ಈ ಹಿಂದೆ ಸುರಿದ ಭಾರೀ ಮಳೆಗೆ, ಎಲ್ಲೆಡೆ ನದಿಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಜಲಪಾತಗಳು ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಕಾಫಿನಾಡು ಇದೀಗ ಈಗ ಜಲಪಾತಗಳ ನಾಡಾಗಿದೆ.
ಮಲೆನಾಡಿನಾದ್ಯಂತ ನೂರಾರು ಜಲಪಾತಗಳ ಸಮಾಗಮವಾಗಿದೆ. ಹೀಗಾಗಿ ಆ ಸೌಂದರ್ಯ ಕಣ್ತುಂಬಿಕೊಳ್ಳಲು ಜನ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಭಾರೀ ಮಳೆಯಿಂದ ಕಾಫಿ ತೋಟದಲ್ಲಿ ಮಳೆಗಾಲದ ಜಲಪಾತಗಳ ಉಗಮವಾಗಿವೆ. ಒಂದೊಂದು ಜಲಪಾತಗಳು ಒಂದೊಂದು ರೀತಿ ಭಿನ್ನ-ವಿಭಿನ್ನವಾಗಿ ಕಾಣುತ್ತಿವೆ. ಭಾರೀ ಮಳೆಯಿಂದ ಕಾಫಿನಾಡಲ್ಲಿ ಹೊಸದೊಂದು ಲೋಕ ಸೃಷ್ಟಿಯಾಗಿದೆ.

ಹೆಜ್ಜೆ ಹೆಜ್ಜೆಗೂ ಜಲಪಾತಗಳು ಸೃಷ್ಟಿಯಾಗಿದೆ ಎಲ್ಲಡೆ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ಸ್ವರ್ಗದಂತೆ ಕಾಣುತ್ತಿದೆ. ಮಲೆನಾಡಿನಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲೆನಾಡ ಭಾಗದ ನದಿ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ, ಮಳೆಯಿಂದ ಮಲೆನಾಡು ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಸ್ವರ್ಗವೇ ಬಂದು ಚಿಕ್ಕಮಗಳೂರಿನಲ್ಲಿ ನೆಲೆಸಿದಂತಿದೆ. ಪ್ರವಾಸಿಗರು ಚಿಕ್ಕಮಗಳೂರಿಗೆ ಬರುತ್ತಿದ್ದಾರೆ.












Click it and Unblock the Notifications