ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ನೂರಾರು ಎಕರೆ ಗದ್ದೆ ಜಲಾವೃತ
ಚಿಕ್ಕಮಗಳೂರು, ಅ.14: ರಾಜ್ಯದ ಹಲವು ಭಾಗಗಳಲ್ಲಿ ಅಕ್ಟೋಬರ್ 13ರಿಂದ ಭಾರಿ ಮಳೆಯಾಗುತ್ತಿದ್ದು, ಜನ ಜೀವ ಅಸ್ತವ್ಯಸ್ತಗೊಂಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಲವೆಡೆ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ತಮಿಳುನಾಡು ಹಾಗೂ ಇತರ ಭಾಗದಲ್ಲಿ ಉಂಟಾದ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ. ಭಾರಿ ಮಳೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು,ಮಂಡ್ಯ, ಮೈಸೂರು, ರಾಮನಗರ ಕೊಡಗು, ಹಾಸನ, ಶಿವಮೊಗ್ಗ ಮತ್ತು ತುಮಕೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ನಿನ್ನೆಯಿಂದಲೇ ಮಳೆ ಆರಂಭವಾಗಿದ್ದು, ಅನೇಕ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಕಾಫಿನಾಡಿನ ಜನರು ಹೈರಾಣಾಗಿ ಹೋಗಿದ್ದಾರೆ. ಭಾರೀ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಹತ್ತಾರು ಎಕರೆ ಗದ್ದೆಗಳು ಮುಳುಗಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಖಾಂಡ್ಯ ಹೋಬಳಿಯ ಪರದೇಶಪ್ಪನಮಠದ ದೇವಾಲಯಕ್ಕೂ ನುಗ್ಗಿದ ಮಳೆ ನೀರು ನುಗ್ಗಿದೆ. ಬಂಡೆಗಳ ಮಧ್ಯೆ ಇರುವ ದೇವಾಲಯದ ಸುತ್ತಲೂ ಮಳೆ ನೀರು ಆವರಿಸಿದ್ದು, ದೇವಾಲಯದ ಜಲಾವೃತಗೊಂಡಿದೆ. ಧಾರಾಕಾರ ಮಳೆಯಿಂದ ಕಾಫಿ ತೋಟಗಳಲ್ಲಿ ಹೊಳೆಯಂತೆ ನೀರು ಹರಿಯುತ್ತಿದ್ದು, ಈ ಭಾರಿ ಎಲ್ಲಾ ಬೆಳೆಗಳು ಮಳೆ ನೀರಿನ ಪಾಲಾಗಿದೆ.

ರಾಜ್ಯ ರಾಜಧಾನಿಯಲ್ಲಿ ವರುಣನ ಆರ್ಭಟ
ಇನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 13ರ ಸಂಜೆಯಿಂದ ವರುಣನ ಆರ್ಭಟ ಆರಂಭವಾಗಿದೆ. ಇಂದು ಮುಂಜಾನೆಯಿಂದಲೇ ರಾಜ್ಯ ರಾಜಧಾನಿಯಲ್ಲಿ ಮಳೆ ಆರಂಭವಾಗಿದ್ದು, ಮಳೆಯಿಂದ ತಗ್ಗು ಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡಿದೆ. ಬೆಂಗಳೂರಿನಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಎಂಸಿ) ನಗರದಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಮಳೆಯ ಪ್ರಮಾಣದ ಬಗ್ಗೆ ಮುನ್ಸೂಚನೆಯ ನಕ್ಷೆಯನ್ನು ಟ್ವೀಟ್ ಮಾಡಿದೆ. ಅದರ ಪ್ರಕಾರ, ಮಹಾದೇವಪುರ ವಲಯ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯಗಳಲ್ಲಿ ಧಾರಾಕಾರವಾಗಿ ಮಳೆ ಬೀಳಲಿದೆ. ಇದರೊಂದಿಗೆ ಜೋರು ಗಾಳಿ ಸಹ ಬೀಸಲಿದ್ದು, ನಗರದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಲಿದೆ. ಶನಿವಾರ ಬೆಳಗ್ಗೆವರೆಗೂ ಈ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications