ಚಿಕ್ಕಮಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ
ಚಿಕ್ಕಮಗಳೂರು, ಅಕ್ಟೋಬರ್ 29 : ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರು ಇನ್ನಿತರೆ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಎಲ್ಲಾ ಪೌರ ಕಾರ್ಮಿಕರಿಗೆ ನಗಸಭೆ ವತಿಯಿಂದ ವಾರ್ಷಿಕ ತಲಾ 11 ಲಕ್ಷ ರೂ.ಗಳ ಆರೋಗ್ಯ ವಿಮೆ ಭರಿಸಲಾಗುತ್ತಿದೆ ಎಂದು ವಿವರಿಸಿದರು.

ಇದಲ್ಲದೆ ಬರೋಡ ಬ್ಯಾಂಕ್ ಜೊತೆ ಮಾತುಕತೆ ನಡೆಸಿ ಅಪಘಾತ ವಿಮೆ ಮಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರಿಗೆ ತಲಾ 40 ಲಕ್ಷ ರೂ.ನ ವಿಮೆ ಇದಾಗಿರುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ವರಸಿದ್ದಿ ವೇಣುಗೋಪಾಲ್ ಪೌರ ಕಾರ್ಮಿಕರಿಗೆ ಮನವಿ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ನಿನ್ನೆ ಇಡೀದಿನ ಅದನ್ನು ಸರಿಪಡಿಸುವ ಕೆಲಸ ಮಾಡಿಸಿದ್ದೇವೆ. ನಗರಸಭೆ ಇಂಜಿನೀಯರುಗಳು, ಸಿಬ್ಬಂದಿ ಮೋಟಾರ್ ದುರಸ್ಥಿಪಡಿಸುವ ಕೆಲಸ ಮಾಡಿ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
ನಗರಸಭೆ ಆಯುಕ್ತ ಬಸವರಾಜು ಮಾತನಾಡಿ, ನಗರದ ಸ್ವಚ್ಛತೆ ವಿಚಾರದಲ್ಲಿ ಯಾವುದೇ ಲೋಪವಾಗಬಾರದು ಎಂದು ಪೌರ ಕಾರ್ಮಿಕರು ಮತ್ತಿತರೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು. ನಿರ್ಮಲಭಾರತಿ ಟ್ರಸ್ಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪೌರ ಕಾರ್ಮಿಕರು ತಿಳಿಸಿದ್ದಾರೆ. ಈ ಸಂಬಂಧ ಸಂಬಂಧಿಸಿದ ಸಂಸ್ಥೆಗೆ ನೋಟೀಸು ನೀಡಲು ಸೂಚಿಸಿದ್ದೇವೆ ಎಂದರು.

ನಾಳೆಯಿಂದ ಎಲ್ಲಾ 162 ಮಂದಿ ಪೌರ ಕಾರ್ಮಿಕರು ನಗರಸಭೆ ಕಚೇರಿಗೆ ಬಂದು ಬಯೋಮೆಟ್ರಿಕ್‍ನಲ್ಲಿ ಹಾಜರಾತಿ ಹಾಕಿ ನಂತರ ಕರ್ತವ್ಯಕ್ಕೆ ಹೋಗಬೇಕು. ನೀರು ಸರಬರಾಜು ಸಿಬ್ಬಂದಿ ಸಹ ಬೆಳಗ್ಗೆ 7 ಕ್ಕೆ ಕಚೇರಿಗೆ ಬಂದು ಹಾಜರಾತಿ ಹಾಕಬೇಕು. ಕಂದಾಯ ಶಾಖೆ ಸಿಬ್ಬಂದಿ 8 ಗಂಟೆಗೆ ಬಂದು ಬಯೋಮೆಟ್ರಿಕ್ ಹಾಜರಾತಿ ಹಾಕಬೇಕು. ನಿಗಧಿತ ಸಮಯದಲ್ಲಿ ಬಂದು ಹಾಜರಾತಿ ಹಾಕದಿದ್ದಲ್ಲಿ ಅಂದು ಗೈರು ಹಾಜರು ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications