ಚಿಕ್ಕಮಗಳೂರು ಮಳೆ: ನೆಮ್ಮಾರಿನ ತೂಗು ಸೇತುವೆ ಕುಸಿತ
ಚಿಕ್ಕಮಗಳೂರು, ಜುಲೈ 17: ಚಿಕ್ಕಮಗಳೂರು ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ತುಂಗಾ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಹಳ್ಳ-ಕೊಳ್ಳಗಳು ತುಂಬಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಶೃಂಗೇರಿ ತಾಲೂಕಿನ ಸುತ್ತಮುತ್ತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ನೆಮ್ಮಾರಿನ ತೂಗು ಸೇತುವೆ ಕುಸಿತಗೊಂಡಿದೆ. ನೋಡ ನೋಡುತ್ತಿದ್ದಂತೆಯೇ ಜನರ ಮುಂದೆಯೇ ಮುರಿದು ಹೋಗಿದೆ. ಕಬ್ಬಿಣದ ತೂಗು ಸೇತುವೆ ಸುಮಾರು 5-6 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು.

ಹೊಳೆಹದ್ದು ಸೇತುವೆ ಕುಸಿತದಿಂದಾಗಿ ಗ್ರಾಮದಿಂದ ಹೊರ ಬರಲಾಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದ ಜನರು ತೂಗು ಸೇತುವೆ ದುಸ್ಥಿತಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮಳೆಗಾಲದಲ್ಲಿ ಸೇತುವೆ ಕುಸಿದು ಬಿದ್ದಿದೆ.
ಪ್ರವಾಸಿಗರಿಗೆ ಮನವಿ: ಭಾರೀ ಮಳೆಯ ಹಿನ್ನಲೆಯಲ್ಲಿ ಪ್ರವಾಸಿಗರು ಕಾಫಿನಾಡು ಚಿಕ್ಕಮಗಳೂರ ಪ್ರವಾಸವನ್ನು ಮುಂದೂಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಜುಲೈ 22ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಲೋಕೋಪಯೋಗಿ ಇಲಾಖೆ ಎಇಇ ಮನವಿ ಮೇರೆಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಗೆ ಗಿರಿ ಮಾರ್ಗದ ದಾರಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದೆ, ನಿರಂತರ ಮಳೆಯಿಂದ ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ.
ಈಗ ಗಿರಿಭಾಗದಲ್ಲಿ ವಾಹನ ಸಂಚಾರ ಅತ್ಯಂತ ಅಪಾಯಕಾರಿಯಾಗಿದೆ. ಕಿರಿದಾದ ರಸ್ತೆಯಲ್ಲಿ ಅನಾಹುತ ಸಂಭವಿಸಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ. ಆದ್ದರಿಂದ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಜುಲೈ 22ರ ಬಳಿಕ ಪ್ರವಾಸಿಗರ ಭೇಟಿಗೆ ಅನುಮತಿ ನೀಡುವ ನಿರೀಕ್ಷೆ ಇದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ತುಂಬಿವೆ. ಶೃಂಗೇರಿಯಲ್ಲಿ ತುಂಗಾ ನದಿ ಆರ್ಭಟಿಸುತ್ತಿದೆ. ನದಿಯ ನೀರು ಭಾರತಿ ತೀರ್ಥ ರಸ್ತೆ, ಪಟ್ಟಣದ ಗಾಂಧಿ ಮೈದಾನದ ತನಕ ಬಂದಿದೆ.
ನದಿ ಪಾತ್ರದ ಅಂಗಡಿ ಮುಂಗಟ್ಟು, ಮನೆಗಳು ಜಲಾವೃತವಾಗಿವೆ. ಶೃಂಗೇರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ನೆರೆ ಪರಿಸ್ಥಿತಿ ಇದೆ. ಭಾರತಿ ತೀರ್ಥ ರಸ್ತೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಮಳೆಯ ಆರ್ಭಟದಿಂದ ಬುಧವಾರ ಬೆಳಗ್ಗೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲೂ ಗುಡ್ಡ ಕುಸಿತ ಸೇರಿ 6 ಕಡೆ ಗುಡ್ಡ ಕುಸಿದು ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಮಳೆ ಹೆಚ್ಚಾದಂತೆ ಗುಡ್ಡದಿಂದ ಬಂಡೆಗಳು ಉರುಳಿ ಬೀಳುತ್ತಿವೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆ ಜಲಪಾತಗಳಿಗೆ ಜೀವಕಳೆ ತಂದಿದೆ. ಜಿಲ್ಲೆಯ ಜಲಪಾತಗಳು ಒಂದಕ್ಕಿಂತ ಒಂದು ಸುಂದರವಾಗಿ ಕಾಣುತ್ತಿವೆ. ಚಿಕ್ಕಮಗಳೂರಿನ ಬಟರ್ ಮಿಲ್ಕ್ ಫಾಲ್ಸ್, ಶೃಂಗೇರಿಯ ಸಿರಿಮನೆ ಜಲಪಾತ, ಕಲ್ಲತ್ತಿಗಿರಿ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತಿವೆ.
ಮಳೆಯಿಂದಾಗಿ ಚಿಕ್ಕಮಗಳೂರು ತಾಲೂಕಿನ ಝರಿ ಫಾಲ್ಸ್ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಫಾಲ್ಸ್ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲದಂತೆ ಭಾಸವಾಗುತ್ತಿದೆ. ಆದರೆ ಮಳೆಯ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಮುಂದೂಡುವುದು ಒಳಿತು.












Click it and Unblock the Notifications