ಚಿಕ್ಕಮಗಳೂರಿನಲ್ಲಿ ಯುವತಿ ಅನುಮಾನಾಸ್ಪದ ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್ 30: ಸಾಮಾಜಿಕ ಜಾಲತಾಣಗಳಲ್ಲಿ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡು ಸಕ್ರಿಯವಾಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿಂಧು (19) ಮೃತ ಯುವತಿ. ಕಲ್ಯಾಣ ನಗರ ನಿವಾಸಿ ಸಿಂಧು ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನೆಯಲ್ಲೇ ಇದ್ದಳು. ಸದಾ ತನ್ನ ತುಂಟಾಟದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಸಿಂಧು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಸೆ.28ರಂದು ಯುವತಿಯ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ತಂದಿದ್ದ ಆಕೆಯ ಪೋಷಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಮಗಳು ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ ಅಂತ ಸಿಂಧು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಗೂ ಮುನ್ನ, ತನ್ನ ತಲೆಗೆ ಪೆಟ್ಟು ಬಿದ್ದಿದ್ದು, ನಾನು ಸಂಕಷ್ಟದಲ್ಲಿದ್ದೀನಿ ಎಂದು ಸ್ನೇಹಿತರ ಜೊತೆ ತನ್ನ ತಲೆ ಹಾಗೂ ಕಿವಿಯಿಂದ ರಕ್ತ ಸೋರುತ್ತಿರುವ ಫೋಟೊಗಳನ್ನ ಶೇರ್ ಮಾಡಿದ್ದಾಳೆ. ಈ ಫೋಟೊಗಳು ಇದೀಗ ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿಯ ತಲೆಯಲ್ಲಿ ರಕ್ತ ಹೇಗೆ ಬಂತು ಎಂಬ ಅನುಮಾನ ಮೂಡಿದೆ. ನಗರ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications