ಹುಲಿ ಉಗುರು ಪ್ರಕರಣ: ಚಿಕ್ಕಮಗಳೂರಿನಲ್ಲಿ ಅರಣ್ಯಾಧಿಕಾರಿ ದರ್ಶನ್ ಅರೆಸ್ಟ್
ಚಿಕ್ಕಮಗಳೂರು, ಅಕ್ಟೋಬರ್ 27: ಕುತ್ತಿಗೆಯಲ್ಲಿ ಅಸಲಿ ಹುಲಿಯ ಉಗುರು ಇರುವ ಲಾಕೆಟ್ ಧರಿಸಿದ ಆರೋಪದ ಮೇಲೆ ಕನ್ನಡ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧವಾಗುತ್ತಿದ್ದಂತೆ, ಅರಣ್ಯ ಇಲಾಖೆಗೆ ಸಾಲು ಸಾಲು ದೂರುಗಳು ದಾಖಲಾಗುತ್ತಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಯೇ ಈ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಡಿ.ಆರ್.ಎಫ್.ಓ ದರ್ಶನ್ ಎನ್ನುವವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರಿನ ಹುರುಳಲ್ಲಿ ಸಿಲುಕಿದ್ದ ಕಳಸದ ಅರಣ್ಯ ಅಧಿಕಾರಿ ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಕೊಪ್ಪ ಡಿಎಫ್ ಓ ನಂದೀಶ್ ಆದೇಶ ಹೊಡಿಸಿದ್ದರು. ಅಮಾನತು ಮಾಡಿದ ಮೇಲೂ ವಿಚಾರಣೆಗೆ ಹಾಜರಾಗದ ದರ್ಶನ್‌ಅನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಕಳಸದ ಡಿ.ಆರ್.ಎಫ್.ಓ. ದರ್ಶನ್ ಅವರು ಹುಲಿ ಉಗುರು ಧರಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ದರ್ಶನ್ ಚಿಕ್ಕಮಗಳೂರು ತಾಲೂಕು ಆಲ್ದೂರು ಮೂಲದವರು. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೇಲೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರು ಲಿಖಿತ ದೂರು ನೀಡಿದ್ದರು. ಇವರು ಹುಲಿ ಉಗುರು ಧರಿಸಿದ್ದು ಸೂಕ್ತ ಕ್ರಮ ಕೈಗೊಂಡು, ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು. ಈ ಆಧಾರದ ಮೇಲೆ ತನಿಖೆ ನಡೆಸಿ ಕ್ರಮ ತೆಗೆದು ಕೊಂಡಿರುವುದಾಗಿ ಕೊಪ್ಪ ಡಿ.ಎಫ್.ಓ. ನಂದೀಶ್ ಹೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ದರ್ಶನ್‌ರನ್ನು ಅಮಾನತು ಮಾಡಲಾಗಿತ್ತು. ಬಳಿಕ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಎಸಿಎಫ್ ಚೇತನ್ ಗಸ್ತಿ, ಕಳಸ ಆರ್ಎಫ್ಓ ನಿಶ್ಚಿತ ನೇತೃತ್ವದ ತಂಡ ಬಂಧಿಸಿ ಕೊಪ್ಪ ಡಿಎಫ್‌ಓ ನಂದೀಶ್ ಮುಂದೆ ಹಾಜರು ಪಡಿಸಿದ್ದಾರೆ.

ದತ್ತಪೀಠದ ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್..!
ಕಾಫಿನಾಡಿನಲ್ಲಿ ವಿನಯ್ ಗುರೂಜಿ ಬಳಿಕ ಮತ್ತೊಂದು ಹುಲಿ ಚರ್ಮದ ಪ್ರಕರಣ ಬೆಳಕಿಗೆ ಬಂದಿದ್ದು, ಇನಾಂ ದತ್ತಾತ್ರೇಯ ಬಾಬಬುಡನ್ ಗಿರಿ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದಲ್ಲಿ ಹುಲಿ ಉಗುರು-ಚರ್ಮದ ಕಂಟಕ ಮುಂದುವರಿದ್ದು, ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಬುಡನ್ ಗಿರಿಯಲ್ಲಿ ಅನಧಿಕೃತವಾಗಿ ವಾಸವಿರುವ ಶಾಖಾದ್ರಿ ಕುಟುಂಬದವರ ಬಳಿಯೂ ಹುಲಿ ಚರ್ಮವಿದೆ. ಶಾಖಾದ್ರಿ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಶ್ರೀರಾಮಸೇನೆಯ ಜಿಲ್ಲಾ ಘಟಕ ಮುಂದಾಗಿದೆ. ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲುವಂತೆ ಡಿ.ಎಫ್.ಓ.ಗೆ ಶ್ರೀರಾಮಸೇನೆ ಮನವಿ ಮಾಡಿದೆ.
ಇನ್ನು ಈ ಬಗ್ಗೆ ಪ್ರತಿ ಕ್ರಿಯೆ ನೀಡಿರುವ ಶ್ರೀರಾಮಸೇನೆ ಮುಖಂಡ ರಂಜಿತ್ ಶೆಟ್ಟಿ ಶಾಖಾದ್ರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅರಣ್ಯಾಧಿಕಾರಿ ಗಳು ಈ ಕೂಡಲೇ ದಾಳಿ ಮಾಡಿ ಹುಲಿ ಚರ್ಮ ವನ್ನ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications