ಕೊಪ್ಪ ತಾಲೂಕಿನ ಜನತೆಗೆ ನಡುಕ ಹುಟ್ಟಿಸಿದ ಕಾಡಾನೆ
ಚಿಕ್ಕಮಗಳೂರು, ಜುಲೈ, 13: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮದ ಸುತ್ತಮುತ್ತ ಕಾಡಾನೆ ಸಂಚರಿಸಿದ್ದು, ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ.
ಮಳೆ ಆರಂಭವಾದ ಹಿನ್ನೆಲೆಯಲ್ಲಿ ರೈತರು ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಡುವೆ ಕಾಡಾನೆ ಸಂಚಾರದಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದಂತಾಗಿದೆ. ಇನ್ನು ಹಾಲ್ ಗೋಡು, ನೆಲ್ಲಿ ಹಡಲು, ಬೆಂಡೆ ಹಕ್ಳು, ಗಾಳಿ ಗುಡ್ಡದಲ್ಲಿ ಆನೆ ಬಂದಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ.

ಕಾಡಾನೆ ಸಂಚಾರದಿಂದ ಇಲ್ಲನ ರೈತರು ತೋಟದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲೆಯಲ್ಲೂ ಮುಂದುವರಿದ ಗಜಗಲಾಟೆ
ಮತ್ತೊಂದೆಡೆ ಹಾಸನ ಜಿಲ್ಲೆಯಲ್ಲಿ ಗಜಗಲಾಟೆ ಮುಂದುವರೆದಿದೆ. ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಸಿರಗುರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಫಿ ತೋಟಗಳಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಅಲ್ಲದೆ ಕಾಫಿ ತೋಟದಲ್ಲೆಲ್ಲಾ ಓಡಾಡಿ ಬೆಳೆ ನಾಶ ಮಾಡಿವೆ. ಹತ್ತರಿಂದ ಹದಿನೈದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶವಾಗಿದೆ.
ಅಕ್ಷತಾ, ಸಂದೇಶ್, ಕಪಿಲ್, ಅಂಜನ್ ಹಾಗೂ ಇತರೇ ರೈತರಿಗೆ ಸೇರಿದ ಕಾಫಿ ತೋಟ ಹಾನಿಯಾಗಿದೆ. ಅಷ್ಟೇ ಅಲ್ಲದೆ ನೀರು ತುಂಬಿದ್ದ ಬ್ಯಾರಲ್‌ಗಳನ್ನು ಧ್ವಂಸ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿದರೂ ಕಾಡಾನೆ ಪಡೆ ಕದಲಿಲ್ಲ. ಒಂದು ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಹೋಗಿ ಬೀಡುಬಿಡುತ್ತಿರುವ ಕಾಡಾನೆ ನಷ್ಟ ಮಾತ್ರವಲ್ಲದೆ ಆತಂಕ ಸೃಷ್ಟಿ ಮಾಡಿವೆ.
ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ, ಕೆಲ ಕಾಡಾನೆಗಳು ರಸ್ತೆಯಲ್ಲಿ ಬಂದು ನಿಲ್ಲುತ್ತಿವೆ. ಕಾಡಾನೆ ಕಾಟ ಹಾಗೂ ಜೀವ ಭಯದಿಂದ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳನ್ನು ರೈತರು ಸಂಬಂಧಿಕರ ಮನೆಯಲ್ಲೇ ಬಿಟ್ಟಿದ್ದಾರೆ. ಕಾಡಾನೆ ದಾಂಧಲೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ನಮಗೆ ವಿಷ ಕೊಡಿ ಎಂದು ದುಃಖ ವ್ಯಕ್ತಪಡಿಸಿದ್ದಾರೆ.












Click it and Unblock the Notifications