ಚಿಕ್ಕಮಗಳೂರಿಗೆ ಒಳ್ಳೆ ಸುದ್ದಿ; ಜಿಲ್ಲೆಯೀಗ ಕೊರೊನಾ ವೈರಸ್ ಮುಕ್ತ
ಚಿಕ್ಕಮಗಳೂರು, ಜೂನ್ 06: ಕಾಫಿನಾಡು ಚಿಕ್ಕಮಗಳೂರಿಗೆ ಶುಭ ಸುದ್ದಿ ಇದಾಗಿದೆ. ಜಿಲ್ಲೆಯ ಕೊರೊನಾ ವೈರಸ್ ಸೋಂಕಿತರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ ಚಿಕ್ಕಮಗಳೂರು ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆ ಮೊದಲು ಕೊರೊನಾ ವೈರಸ್ ನ ಯಾವುದೇ ಪ್ರಕರಣಗಳಿಲ್ಲದೇ ನೆಮ್ಮದಿಯಿಂದಿತ್ತು. ಆದರೆ 55 ದಿನಗಳ ಬಳಿಕ, ಮೊದಲ ಪ್ರಕರಣವಾಗಿ ಐವರಲ್ಲಿ ಕೊರೊನಾ ವೈರಸ್ ಪ್ರಕರಣ ಕಂಡುಬಂದಿದೆ ಎಂದು ತಿಳಿಸಿದ್ದರು. ಅದರಲ್ಲಿ ಇಬ್ಬರ ವರದಿ ನಂತರ ನೆಗೆಟಿವ್ ಬಂದಿತ್ತು. ಆಗಲೇ ಜಿಲ್ಲೆಯ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ನಂತರ ಮುಂಬೈನಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡು ಜಿಲ್ಲೆಯಲ್ಲಿ ಒಟ್ಟು 16 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು.
ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು; ಕ್ವಾರಂಟೈನ್ ನಲ್ಲಿದ್ದ 485 ಮಂದಿ ಬಿಡುಗಡೆ
ಸೋಂಕಿತರೆಲ್ಲರಿಗೂ ಪ್ರತ್ಯೇಕ ಚಿಕಿತ್ಸೆ ನೀಡಲಾಗಿತ್ತು. ಜಿಲ್ಲೆಯ ಕೊರೊನಾ ವೈರಸ್ ಸೋಂಕಿತರೆಲ್ಲರೂ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರೆಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಅವರೆಲ್ಲರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಮುನ್ನ ಜಿಲ್ಲಾಡಳಿತವು ಎಲ್ಲರ ವೈದ್ಯಕೀಯ ಪರೀಕ್ಷೆ ಮಾಡಿಸಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಹೀಗಾಗಿ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದೇ ಚಿಕ್ಕಮಗಳೂರು ಕೊರೊನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ.