ಶೃಂಗೇರಿ ಕ್ಷೇತ್ರದಲ್ಲಿ ಜನರ ಬಳಿ ದೇಣಿಗೆ ಸಂಗ್ರಹ ಮಾಡಿ ಗಮನ ಸೆಳೆದ ಕಾಂಗ್ರೆಸ್ ಮುಖಂಡ
ಚಿಕ್ಕಮಗಳೂರು, ಏಪ್ರಿಲ್, 02: ರಾಜ್ಯ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಎಲ್ಲಾ ಪಕ್ಷಗಳಲ್ಲೂ ಬಂಡಾಯದ್ದೇ ಚಿಂತೆ ಆಗಿದೆ. ಅದೇ ರೀತಿ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚುನಾವಣೆಗೆ ಹಣ ಸಂಗ್ರಹ ಮಾಡಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿ ಕ್ಷೇತ್ರದ ಗೋರಿಗಂಡಿ ಗ್ರಾಮದಲ್ಲಿ ದೇಣಿಗೆ ಬಾಕ್ಸ್ ಹಿಡಿದು ಮನೆ-ಅಂಗಡಿಗಳಿಗೆ ಹೋಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಲಿಯಾಸ್ ಹಣ ಸಂಗ್ರಹಿಸಿದ್ದಾರೆ. ಅಲ್ಲದೇ ಶಾಸಕ ರಾಜೇಗೌಡರಿಂದ ಶೃಂಗೇರಿ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎಂದು ಇಲಿಯಾಸ್ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ದೇಣಿಗೆ ಸಂಗ್ರಹಿಸಿ ಜನರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಶಾಸಕ ರಾಜೇಗೌಡಗೆ ಸೆಡ್ಡು ಒಡೆಯಲು ಕಾಂಗ್ರೆಸ್ ಮುಖಂಡ ಇಲಿಯಾಸ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ
ಮತ್ತೊಂದೆಡೆ ಇತ್ತೀಚೆಗಷ್ಟೇ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಚರಣೆಯೊಂದರಲ್ಲಿ ಸಮರ್ಪಕವಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 17 ಕೆ.ಜಿ. ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ತರೀಕೆರೆ ತಾಲೂಕಿನ ಸಿ.ಕೆ.ಹಳ್ಳಿ ಗ್ರಾಮದಲ್ಲಿ ವಾಹನವೊಂದನ್ನು ತಪಾಸಣೆ ನಡೆಸಿದ ವೇಳೆ ವಾಹನದಲ್ಲಿ 6.44 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಇರುವುದು ಪತ್ತೆಯಾಗಿದೆ.
ಈ ಆಭರಣಗಳಿಗೆ ವಾಹನದಲ್ಲಿದ್ದವರ ಬಳಿ ಸೂಕ್ತ ದಾಖಲೆಗಳು ಇಲ್ಲದ ಪರಿಣಾಮ ವಾಹನ ಸಹಿತ ಚಿನ್ನಾಬೆಳ್ಳಿಯ ಆಭರಣಗಳನ್ನು ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ರಮೇಶ್, ಎಸ್‌ಪಿ ಉಮಾಪ್ರಶಾಂತ್, ಜಿಪಂ ಸಿಇಒ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೆಲ ದಿನಗಳ ಹಿಂದೆ ದಾಖಲೆ ಇಲ್ಲದ 2 ಕೋಟಿ 30 ಲಕ್ಷ ಬೆಲೆ ಬಾಳುವ 9 ಕೆ.ಜಿ. 300 ಗ್ರಾಂ ಚಿನ್ನವನ್ನು ಚಿಕ್ಕಮಗಳೂರು ಪೊಲೀಸರು ವಶ ಪಡಿಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ದಾಖಲೆ ಇಲ್ಲದೆ ಪಿಕಪ್‌ನಲ್ಲಿ ಸಾಗಿಸುತ್ತಿದ್ದ 2.30 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದರು.
1.40 ಕೋಟಿ ರೂ. ಪತ್ತೆ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚೆಪೋಸ್ಟ್‌ಗಳನ್ನು ತೆರೆಯಲಾಗಿದ್ದು, ದಾಖಲೆಯಿಲ್ಲದೆ ಸಾಗಾಣೆ ಮಾಡುತ್ತಿದ್ದ ಕೋಟ್ಯಾಂತರ ರೂಪಾಯಿ ನಗದನ್ನುಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ, ಬುಲೆರೋ ಕಾರಿನಲ್ಲಿ 1.40 ಕೋಟಿ ರೂ. ಪತ್ತೆಯಾಗಿದೆ.
ಇನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 20 ಲಕ್ಷ ರೂ. ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಶಾಸಕರ ಮನೆಯಲ್ಲೇ ಚೆಕ್ ವಿತರಣೆ
ಇನ್ನು ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಹಿನ್ನೆಲೆ ಬುಧವಾರ (ಮಾರ್ಚ್ 29)ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಆದರೂ ಕೂಡ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಮನೆಯಲ್ಲೇ ಚೆಕ್ ವಿತರಣೆ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಘನೆ ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಮೂಡಿಗೆರೆ ಶಾಸಕಸರ ವಿರುದ್ಧ ದೂರು ದಾಖಲು ಚುನಾವಣಾ ನೀತಿ ಸಂಹಿತೆ ಉಲ್ಲಂಘಿನೆ ಹಿನ್ನೆಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಂ.ಪಿ.ಕುಮಾರಸ್ವಾಮಿ ವಿರುದ್ಧ ತಾಲೂಕು ಚುನಾವಣಾ ಅಧಿಕಾರಿ ಪಿ.ರಾಜೇಶ್ ದೂರು ದಾಖಲಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಎಂ.ಪಿ.ಕುಮಾರಸ್ವಾಮಿಯವರು ಜನರಿಗೆ ಚೆಕ್ ವಿತರಣೆ ಮಾಡಿದ್ದಾರೆ. ಆಗ ದಿಢೀರ್ ಭೇಟಿ ಕೊಟ್ಟ ಚುನಾವಣಾ ಅಧಿಕಾರಿಗಳು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.












Click it and Unblock the Notifications