ಚಿಕ್ಕಮಗಳೂರು: "ದೇವರಮನೆ" ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ಯುವಕ ನಾಪತ್ತೆ
ಚಿಕ್ಕಮಗಳೂರು, ಅಕ್ಟೋಬರ್, 11: ಪ್ರವಾಸಕ್ಕೆ ಬಂದಿದ್ದ ಯುವಕ ಅನುಮಾನಾಸ್ಪದ ಕಣ್ಮರೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡ ಬಳಿ ನಡೆಸಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ದೀಕ್ಷಿತ್ (27) ನಾಪತ್ತೆಯಾದ ಯುವಕ. ದೇವರಮನೆ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ನಾಲ್ವರು ಯುವಕರು ಕಾರಿನಲ್ಲಿ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡ ಪ್ರವಾಸಕ್ಕೆ ತೆರಳಿದ್ದು, ಅಲ್ಲಿಂದ ಪ್ರವಾಸ ಮುಗಿಸಿಕೊಂಡು ವಾಪಸ್ ತೆರಳುವಾಗ ಗುಡ್ಡೆತೋಟ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಮುನಿಸಿಕೊಂಡ ಯುವಕ ದೀಕ್ಷಿತ್ ಕಾರು ಹತ್ತದೆ ಕಣ್ಮರೆಯಾಗಿದ್ದು, ಈ ಯುವಕನಿಗಾಗಿ ಇದೀಗ ತೀವ್ರ ಹುಡುಕಾಟ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಇದೀಗ ಪ್ರವಾಸದ ವೇಳೆ ಯುವಕ ದೀಕ್ಷಿತ್ ಕಣ್ಮರೆಯಾಗಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಇನ್ನು ರಾತ್ರಿಯಿಡಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಯಿಂದ ನಾಪತ್ತೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಮಗನನ್ನು ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನ
ಇನ್ನು ಕೆಲವು ತಿಂಗಳ ಹಿಂದೆಯಷ್ಟೇ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಮಗನನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುತ್ತೇವೆಂದು ಪೋಷಕರು ತಿಳಿಸಿದ್ದರು.
ನಾಪತ್ತೆಯಾದ ಯುವಕನನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ತಿಮ್ಲಾಪುರ ಗ್ರಾಮದ 22 ವರ್ಷದ ಲವ ಎಂದು ಗುರುತಿಸಲಾಗಿತ್ತು. ಮಗ ನಾಪತ್ತೆಯಾಗುತ್ತಿದಂತೆ ಪೋಷಕರು ಆತಂಕದಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ತೀವ್ರ ಹುಡುಕಾಟ ನಡೆಸಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಬರುವ ವಾಹನಗಳನ್ನು ಚೆಕ್ ಮಾಡಿದ್ದರು. ಸರ್ಕಾರಿ ಬಸ್‌ಗಳನ್ನು ಪರಿಶಿಲನೆ ನಡೆಸಿದ್ದರು. ಆದರೆ ಯುವಕ ಪತ್ತೆಯಾಗಿರಲಿಲ್ಲ.
ಯುವಕ ಲವನ ಬುದ್ಧಿಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ಆದರೆ ಒಂದಷ್ಟು ಜ್ಞಾನ ಇದೆ. ಒಳ್ಳೆದು-ಕೆಟ್ಟದ್ದರ ಅರಿವಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಈತ ಹಾಸನದಿಂದ ಪೋಷಕರ ಜೊತೆಯೇ ನಡೆದುಕೊಂಡು ಬಂದವನು ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾನೆ. ಕೂಡಲೇ ಜೊತೆಯಲ್ಲಿದ್ದವರು ಅಂಗಡಿ-ಮುಂಗಟ್ಟು, ಬಸ್, ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದ್ದರು. ಆದರೆ, ಆತನ ಸುಳಿವು ಸಿಕ್ಕಿರಲಿಲ್ಲ. ಕೂಡಲೇ ಪೋಷಕರು ಇಲ್ಲೇ ಎಲ್ಲೋ ಸುತ್ತಮುತ್ತಾ ಇರುತ್ತಾನೆ ಎಂದು ಸ್ಥಳೀಯರ ಸಹಾಯ ಪಡೆದಿದ್ದರು. ಆದರೂ ಸಿಕ್ಕಿರಲಿಲ್ಲ.
ಮಗ ಕಾಣದೇ ಗಾಬರಿಗೊಂಡಿರುವ ಪೋಷಕರು ಮಗಗನ್ನು ಹುಡುಕಿ ಕೊಟ್ಟರೆ ಐದು ಸಾವಿರ ಹಣ ನೀಡುವುದಾಗಿ ಹೇಳಿದ್ದರು. ಕೊಟ್ಟಿಗೆಹಾರದ ಸ್ಥಳೀಯ ಯುವಕರಾದ ಸಂತೋಷ್, ತನ್ವೀರ್, ಸಂಜಯ್, ನಂದೀಶ್ ಸೇರಿದಂತೆ ಹಲವು ಯುವಕರು ನಿಮ್ಮ ಹಣ ಬೇಡ. ನಿಮ್ಮ ಮಗ ಸಿಕ್ಕರೆ ಸಾಕು ಎಂದು ತೀವ್ರ ಹುಡುಕಾಟ ನಡೆಸಿದ್ದರು. ಆತನ ಫೋಟೋವನ್ನು ಮೊಬೈಲ್‌ನಲ್ಲಿ ಬೇರೆಯವರಿಗೂ ಶೇರ್ ಮಾಡಿದ್ದರು.ಕೊನೆಗೆ ಪೋಷಕರು ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.












Click it and Unblock the Notifications