ಶ್ರೀರಾಮನವಮಿಗೆ ಪಾನಕ-ಮಜ್ಜಿಗೆ ಹಂಚಿದ ಜಮೀರ್ ಅಹ್ಮದ್
ಹೊಸಕೋಟೆ, ಏಪ್ರಿಲ್ 13: ಲೋಕಸಭೆ ಚುನಾವಣೆ ಪ್ರಚಾರದಲ್ಲಿದ್ದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಶ್ರೀರಾಮನವಮಿ ಪ್ರಯುಕ್ತ ಭಕ್ತರಿಗೆ ಮಜ್ಜಿಗೆ-ಪಾನಕ ಹಂಚಿ ಖುಷಿ ಪಟ್ಟರು.
ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆಯಲ್ಲಿ ಇಂದು ಬೆಳಿಗ್ಗೆ ಪ್ರಚಾರ ನಡೆಸಿದ ಸಚಿವ ಜಮೀರ್ ಅಹ್ಮದ್ ಅವರು ಹನುಮ ದೇವಾಲಯವೊಂದರ ಬಳಿ ಪ್ರಚಾರ ವಾಹನವನ್ನು ನಿಲ್ಲಿಸಿ ಭಕ್ತಾದಿಗಳಿಗೆ ಪಾನಕ-ಮಜ್ಜಿಗೆಯನ್ನು ಹಂಚಿದರು. ತಾವೂ ಸಹ ಪಾನಕ-ಮಜ್ಜಿಗೆ ಕುಡಿದು ಸಂತೃಪ್ತರಾದರು.
ಜಮೀರ್ ಅಹ್ಮದ್ ಅವರು ಇಂದು ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆ, ವಿಜಯಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೈತ್ರಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ಮಾಡಿದರು.

ಹೊಸಕೋಟೆಯಲ್ಲಿ ಮಾತ್ರವಲ್ಲದೆ, ದೇವನಹಳ್ಳಿ, ಚಿಕ್ಕಬಳ್ಳಾಪುರದಲ್ಲೂ ಸಹ ದಾರಿ ಮಧ್ಯೆ ಪಾನಕ-ಮಜ್ಜಿಗೆಗಳನ್ನು ಹಂಚಿದರು. ಜಮೀರ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಅಭಿಮಾನಿಗಳಿಗೆ, ಮಕ್ಕಳಿಗೆ ಕೈತುತ್ತು ನೀಡುವ ಅಭ್ಯಾಸವಿಟ್ಟುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೇವಲ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications