ನಂದಿ ಗಿರಿಧಾಮದಲ್ಲಿ ಪ್ರವಾಸಿಗರಿಗೆ ತಡೆ, ಪ್ರತಿಭಟನೆ
ಚಿಕ್ಕಬಳ್ಳಾಪುರ, ಮಾರ್ಚ್ 21: ಬೆಂಗಳೂರು ನಗರದ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಪ್ರವಾಸಿಗರಿಗೆ ತಡೆ ಹಾಕಲಾಗಿದೆ. ಅಧಿಕಾರಿಗಳ ಕಾರ್ಯ ವೈಖರಿ ಖಂಡಿಸಿ ಪ್ರವಾಸಿಗರು ಪ್ರತಿಭಟನೆ ನಡೆಸಿದರು.
ಭಾನವಾರ ನಂದಿ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಅವರ ಭೇಟಿಗೆ ಅವಕಾಶ ನೀಡದೆ ಅಧಿಕಾರಿಗಳು ವಾಪಸ್ ಕಳಿಸಿದರು. ಇದರಿಂದಾಗಿ ಅಧಿಕಾರಿಗಳ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನ್ವಯ ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಆದರೆ ಹೆಚ್ಚು ಜನ ಸಂದಣಿ ಸೇರಿದ್ದರಿಂದ ಅಧಿಕಾರಿಗಳು ನಂದಿ ಗಿರಿಧಾಮದ ಮೇಲೆ ಪ್ರವಾಸಿಗರನ್ನು ತಡೆದಿದ್ದಾರೆ.

ವಾರಾಂತ್ಯದ ಎರಡು ದಿನ ನಂದಿ ಗಿರಿಧಾಮನದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಸಾಮಾನ್ಯ ಪ್ರವಾಸಿಗರನ್ನು ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ. ಇದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಯಿತು.
ನಂದಿ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಸುಮಾರು 10 ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿರುತ್ತದೆ. ಭಾನುವಾರ ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ನಿಂತಿದ್ದರು. ಪ್ರವಾಸಿಗರು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು.
ಬೇಸಿಗೆ ಸಂದರ್ಭದಲ್ಲಿ ನಂದಿ ಗಿರಿಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಆದರೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸಿಗರ ಪ್ರವೇಶಕ್ಕೆ ಮಿತಿ ಹೇರಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಗೌತಮ್ ಮಿಶ್ರಾ ಭಾನುವಾರ ಕುಟುಂಬ ಸಮೇತ ನಂದಿ ಗಿರಿಧಾಮಕ್ಕೆ ಹೋಗಿದ್ದರು. ಆದರೆ ಗೇಟ್‌ನಲ್ಲಿಯೇ ಪೊಲೀಸರು ತಡೆದರು. ಗೇಟ್‌ನಲ್ಲಿ ತಡೆಯಲಾದ ಇನ್ನು ಹಲವು ಪ್ರವಾಸಿಗರು ದಿಢೀರ್ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಂಜಾನೆ 4.30ರಿಂದ ಬಂದ ಸುಮಾರು 1000 ಪ್ರವಾಸಿಗರನ್ನು ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ ಎಂದು ಪ್ರವಾಸಿಗರು ಹೇಳಿದ್ದಾರೆ. ಅವರೆಲ್ಲರೂ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇದ್ದು 2,500 ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಬುಕ್ಕಿಂಗ್ ಪೂರ್ಣಗೊಂಡರೂ ಸಹ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಪ್ರವಾಸಿಗರು ದೂರಿದರು.
2021ರ ಆಗಸ್ಟ್‌ನಲ್ಲಿ ನಂದಿ ಗಿರಿಧಾಮದ ಮೇಲೆ ಹೋಗುವ ರಸ್ತೆ ಭಾರೀ ಮಳೆಯ ಕಾರಣ ಕುಸಿದಿತ್ತು. ಸುಮಾರು ನಾಲ್ಕು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಪ್ರವಾಸಿಗರ ಸಂಖ್ಯೆಗೆ ನಿರ್ಬಂಧ ಹೇರಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.











Click it and Unblock the Notifications