Pradeep Eshwar: ಹಾಸನ ಭೀಕರ ಅಪಘಾತ; ಅನಾಥ ಮಕ್ಕಳನ್ನು ನೋಡಿ ಕಣ್ಣೀರಾಕಿದ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ, ಮೇ. 27: ಹಾಸನದ ಸಮೀಪ ಭಾನುವಾರ (ಮೇ. 26) ಬೆಳಗ್ಗೆ ಸಂಭವಿಸಿದ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತರೆಲ್ಲಾ ಚಿಕ್ಕಬಳ್ಳಾಪುರದ ಮೂಲಕದವರಾಗಿದ್ದು, ಮೃತರ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿದ್ದಾರೆ.
ಅಪಘಾತದ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಮೃತರ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ಶಾಸಕ ಪ್ರದೀಪ್ ಈಶ್ವರ್ ವಹಿಸಿಕೊಂಡಿದ್ದಾರೆ. ಸಂತ್ರಸ್ತರನ್ನು ಮಾತನಾಡಿಸಿ, ಅವರ ಕಷ್ಟ ಕೇಳಿಸಿಕೊಂಡ ಅವರು, ತಮ್ಮ ಕೈಲಾದಷ್ಟು ಸಹಾಯ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಪರಿಹಾರ ಕೂಡ ನೀಡಿದ್ದಾರೆ.

ಬಾಲಕಿಯರನ್ನು ಕಂಡು ಕಣ್ಣೀರಾಕಿದ ಪ್ರದೀಪ್ ಈಶ್ವರ್
ಅಪಘಾತದಲ್ಲಿ ಮೃತಪಟ್ಟ ರವಿಕುಮಾರ್ ಹಾಗೂ ನೇತ್ರಾ ಅವರದ್ದು ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಳ್ಳಿ ಗ್ರಾಮ. ಮೃತ ನೇತ್ರ ಹಾಗೂ ರವಿಕುಮಾರ್ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಅಪಘಾತದಲ್ಲಿ ಮಗ ಚೇತನ್, ತಂದೆ-ತಾಯಿ ಜೊತೆ ಅಸುನೀಗಿದ್ದಾರೆ. ಮಕ್ಕಳಾದ ಪಲ್ಲವಿ ಹಾಗೂ ಪೂರ್ಣಿಮಾ ಅನಾಥರಾಗಿದ್ದಾರೆ.
ಚಿಗಟೇನಹಳ್ಳಿಯ ಮೃತ ರವಿಕುಮಾರ್ ಹಾಗೂ ನೇತ್ರಾ ದಂಪತಿಯ ಮಕ್ಕಳನ್ನು ಶಾಸಕ ಪ್ರದೀಪ್ ಈಶ್ವರ್ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಅನಾಥರಾದ ಬಾಲಕಿಯರನ್ನು ಕಂಡು ಪ್ರದೀಪ್ ಈಶ್ವರ್ ಕಣ್ಣೀರಾಕಿದರು. ಇಬ್ಬರು ಅಜ್ಜಿಯ ಮನೆಯಲ್ಲಿದ್ದಾರೆ. ಇಬ್ಬರ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ಶಾಸಕ, ಬಾಲಕಿಯರ ಹೆಸರಿನಲ್ಲಿ ತಲಾ 1 ಲಕ್ಷ ರೂಪಾಯಿ ಪೋಸ್ಟಲ್ ಡೆಪಾಸಿಟ್ ಕೂಡ ಇರಿಸುವ ಭರವಸೆ ನೀಡಿದ್ದಾರೆ.
ನಾನು ಅನಾಥನಾದಾಗ ನನ್ನ ಜೊತೆಗೆ ಪ್ರದೀಪ್ ಈಶ್ವರ್ ಇರಲಿಲ್ಲ
ಮಕ್ಕಳನ್ನು ಬಾಲ್ಯದಲ್ಲಿ ತಾನೂ ಕೂಡ ಅಪಘಾತದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ಸ್ಥಿತಿಯನ್ನು ನೆನೆಸಿಕೊಂಡಿದ್ದಾರೆ. ಮಾರ್ಧಯಮಗಳ ಜೊತೆಗೆ ಮಾತನಾಡಿದ ಅವರು, "ಒಂದು ಮಗು ಆರನೇ ತರಗತಿ ಒನ್ನೊಂದು ನಾಲ್ಕನೇ ತರಗತಿಯಲ್ಲಿದ್ದಾರೆ. ನಾಳೆಯೇ ಇಬ್ಬರ ಹೆಸರಿನಲ್ಲಿ ಮುದ್ದೇನಹಳ್ಳಿ ಪೋಸ್ಟ್ ಆಫೀಸ್‌ನಲ್ಲಿ ಒಂದೊಂದು ಲಕ್ಷ ಡೇಪಾಸಿಟ್ ಇಡುತ್ತೇನೆ. ಇವರು ಮದುವೆ ವಯಸ್ಸಿಗೆ ಬಂದಾಗ ನಾನು ಶಾಸಕ ಆಗಿರಲಿ, ಆಗದೇ ಇರಲಿ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡುತ್ತೇನೆ. ಇಬ್ಬರ ಮಕ್ಕಳ ಭವಿಷ್ಯವನ್ನು ನಾನು ನೋಡಿಕೊಳ್ಳುತ್ತೇನೆ. ಅವರ ಭವಿಷ್ಯಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ" ಎಂದಿದ್ದಾರೆ.
ಇದೆಲ್ಲಾ ಮುಗಿಯಲಿ, ಅವರು ಇಲ್ಲಿಯೇ ಓದುತ್ತಾರೋ ಇಲ್ಲ ಬೇರೆ ಕಡೆ ಓದುತ್ತಾರೋ ಅಲ್ಲಿ ಓದಿಸುತ್ತೇನೆ. ನೀವು ಧೈರ್ಯವಾಗಿರಬೇಕು. ನಾನು ಚಿಕ್ಕವಯಸ್ಸಿನಲ್ಲಿ ಅನಾಥನಾದಾಗ ನನ್ನ ಜೊತೆಗೆ ಪ್ರದೀಪ್ ಈಶ್ವರ್ ಇರಲಿಲ್ಲ, ಈಗ ನಿಮ್ಮ ಜೊತೆ ಪ್ರದೀಪ್ ಈಶ್ವರ್ ಇರುತ್ತೇನೆ. ಅವರ ತಂದೆ ತಾಯಿ ಸ್ಥಾನದಲ್ಲಿ ನಿಂತು ನಾನು ಕಾಪಾಡುತ್ತೇನೆ" ಎಂದು ಭಾವುಕರಾಗಿದ್ದಾರೆ.
ಹಾಸನ: ಭೀಕರ ಅಫಘಾತಕ್ಕೆ ಚಿಕ್ಕಬಳ್ಳಾಪುರದ ಆರು ಮಂದಿ ಬಲಿ
ಹಾಸನ ಸಮೀಪದ ಬೆಂಗಳೂರು-ಮಂಗಳೂರು ಹೆದ್ದಾರಿ 75 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿಕ್ಕಬಳ್ಳಾಪುರದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಾಸನ ಜಿಲ್ಲೆಯ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿ ದುರ್ಘಟನೆ ಸಂಭವಿಸಿತ್ತು. ದುರಂತದಲ್ಲಿ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಸ್ಥಳದಲ್ಲೇ ಅಸುನೀಗಿದ್ದರು.












Click it and Unblock the Notifications