ಶಾಸಕ ಪ್ರದೀಪ್ ಈಶ್ವರ್-ಬಿಜೆಪಿ ಮುಖಂಡ ನವೀನ್ ಕಿರಣ್ ಜಟಾಪಟಿಗೆ ವೇದಿಕೆ ಆಗುವುದೇ 'ಅಳತೆ'
ಚಿಕ್ಕಬಳ್ಳಾಪುರ ಡಿಸೆಂಬರ್ 20: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ವ್ಯಾಪ್ತಿಯ ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್.16ರ ಅಳತೆಗೆ ಶಾಸಕ ಪ್ರದೀಪ್ ಈಶ್ವರ್ ಅವರು ಸೂಚನೆ ನೀಡಿದ್ದು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸಿಕೊಂಡಿವೆ.
ಸರ್ವೇ ನಂಬರ್ 16 ರಲ್ಲಿ 42 ಎಕರೆ ಸರ್ಕಾರಿ ಭೂಮಿ ಇದೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ ಕ್ಯಾಂಪಸ್ ಅಸುಪಾಸಿನವರೆಗೂ ಈ ಜಮೀನು ಬರುತ್ತದೆ ಎನ್ನುತ್ತವೆ ಭೂ ದಾಖಲೆಗಳ ಇಲಾಖೆ ಮೂಲಗಳು, ಶಿಕ್ಷಣ ಸಂಸ್ಥೆಯ ಸಮೀಪ ಈ ಜಮೀನು ಒತ್ತುವರಿಯಾಗಿದೆಯೇ -ಎನ್ನುವುದನ್ನು ಖಚಿತಪಡಿಸಿಕೊಳ್ಳಲು -ಅಳತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಸುತ್ತಿವೆ.

ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ.ವಿ.ನವೀನ್ ಕಿರಣ್ ಮತ್ತು ಶಾಸಕ -ಪ್ರದೀಪ್ ಈಶ್ವರ್ ರಾಜಕೀಯವಾಗಿ ಕಡು ವಿರೋಧಿಗಳಾಗಿದ್ದು ರಾಜಕೀಯ ಜಿದ್ದಾ ಜಿದ್ದಿಗೆ ದಾರಿ ಮಾಡಿಕೊಡುವ ಸಾಧ್ಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜಮೀನು ಅಳತೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು ಎಂದು ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ಶಾಸಕರು ಸೂಚನೆ ನೀಡಿದ ಎರಡು ಮೂರು ದಿನಗಳಲ್ಲಿಯೇ ಅಧಿಕಾರಿಗಳು ಅಳತೆಗೆ ಮುಂದಾಗಿದ್ದಾರೆ. ಶಾಸಕರು ಕೆ.ವಿ. ಕ್ಯಾಂಪಸ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ಅಳತೆಗೆ ಮುಂದಾಗಿದ್ದಾರೆ ಎನ್ನುತ್ತವೆ ಅಧಿಕಾರಿಗಳ ಮೂಲಗಳು.

ಶಾಸಕರ ಮೌಖಿಕ ಆದೇಶದ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಸರ್ವೆಗೆ ಮುಂದಾಗಿದೆ. ಸದರಿ ಸರ್ವೆ ನಂಬರ್ ಸಂಬಂಧಪಟ್ಟ ಮೂಲ ಮಂಜೂರಿ ಕಡತ ಹಾಗೂ 53, 57 ಅರ್ಜಿ ಸಲ್ಲಿಕೆಯ ಬಗ್ಗೆ ವಿವರ ಹಾಗೂ ಗುತ್ತಿಗೆ ನೀಡಿದ್ದಲ್ಲಿ ಆ ಬಗ್ಗೆ ದಾಖಲೆಗಳನ್ನು ಅಳತೆಗೆ ಮುನ್ನ ಕಡತಗಳನ್ನು ಭೂ ಮಾಪಕರಿಗೆ ನೀಡುವುದು ಹಾಗೂ ಅಳತೆ ವೇಳೆ ಸಂಬಂಧಪಟ್ಟ, ಪಿಡಿಒ ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಖುದ್ದು ಹಾಜರಿದ್ದು ಭೂಮಾಪಕರಿಗೆ ಮಾಹಿತಿ ಒದಗಿಸಲು ಕೋರಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದಾರೆ.
ರಾಜಕೀಯ ಜಟಾಪಟಿಗೆ ಕಾರಣವಾಗುತ್ತಾ?:
ರಾಜಕಾರಣ ನಿಂತ ನೀರಲ್ಲ. ಇಂದು ವಿರೋಧಿ ಎನಿಸಿದ್ದವರು, ನಾಳೆಯ ದಿನ ಅತ್ಯಾಪ್ತ ಎನಿಸಬಹುದು. ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಈ ಮಾತುಗಳು ಅಗಾಗ್ಗೆ ಸಾಬೀತಾಗುತ್ತಲೇ ಇದೆ. 2018ರ ವಿಧಾನಸಭೆ ಚುನಾವಣೆ ವೇಳೆ ಒಂದೇ ತೆಕ್ಕೆಯಲ್ಲಿದ್ದ ಕೆ.ವಿ.ನವೀನ್ ಕಿರಣ್ ಮತ್ತು ಇಂದಿನ ಶಾಸಕ ಹಾಗೂ ಅಂದಿನ ಉಪನ್ಯಾಸಕ ಪ್ರದೀಪ್ ಈಶ್ವರ್ 2023ರ ಚುನಾವಣೆಯ ವೇಳೆಗೆ ವಿರೋಧಿಗಳಾಗಿದ್ದರು.
2018 ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್ ಪರವಾಗಿ ಅಂದು ಪ್ರದೀಪ್ ಈಶ್ವರ್ ಸ್ಟಾರ್ ಪ್ರಚಾರಕ ಎನಿಸಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕೆ.ವಿ.ನವೀನ್ ಕಿರಣ್, ಡಾ. ಕೆ.ಸುಧಾಕರ್ ಅವರ ಮೂಲಕ ಬಿಜೆಪಿ ಸೇರಿದರು. ಬಲಿಜ ಸಮುದಾಯದ ಪ್ರಭಾವಿ ನಾಯಕ ಏನಿಸಿರುವ ನವೀನ್ ಕಿರಣ್ ಒತ್ತಡದಿಂದಲೇ ಬಿಜೆಪಿ ಸೇರಿದರು ಎನ್ನುವ ಮಾತುಗಳು ಆಗ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಜೋರಾಗಿದ್ದರು. ಅವರು ಅಂದಿನ ಬಿಜೆಪಿ ಪಕ್ಷದ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಬಿಎಂಟಿಸಿ ಉಪಾಧ್ಯಕ್ಷರು ಸಹ ಆಗಿದ್ದರು.
ನಂತರದ ದಿನಗಳಲ್ಲಿ ಈ ಇಬ್ಬರು ಬಲಿಜ ಮುಖಂಡರ ನಡುವೆ ಶೀತಲ ಸಮರ ಮುಂದುವರಿದಿತ್ತು. ಬಲಿಜ ಸಮುದಾಯದ ಕೆಲವರು ನವೀನ್ ಕಿರಣ್ ಪರವಾಗಿ ನಿಂತರೆ, ನವೀನ್ ಕಿರಣ್ ವಿರೋಧಿ ಬಣದ ಮುಖಂಡರು ಅತ್ತ ಪ್ರದೀಪ್ ಈಶ್ವರ್ ಪರವಾಗಿ ನಿಂತು ವಕಾಲತ್ತು ನಡೆಸಿದ್ದನ್ನು ಮರೆಯುವಂತಿಲ್ಲ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಈಶ್ವರ್ ವಿರುದ್ಧ ನವೀನ್ ಕಿರಣ್ ಟೀಕಾಪ್ರಹಾರವನ್ನೇ ನಡೆಸಿ ಬಿಜೆಪಿ ಹಾಗೂ ಡಾ. ಕೆ. ಸುಧಾಕರ್ ಪರವಾಗಿ ಚುನಾವಣೆಯಲ್ಲಿ ಭಾಗಿಯಾಗಿದ್ದರು.
ತಾನೇನು ಕಡಿಮೆ ಇಲ್ಲ ಎಂಬಂತೆ ಚುನಾವಣಾ ಪ್ರಚಾರಕೆಂದು ಹೋದಲ್ಲಿ ಬಂದಲ್ಲಿ ಪ್ರದೀಪ್ ಈಶ್ವರ್ ಸಹ ನವೀನ್ ಕಿರಣ್ ಅವರ ವಿರುದ್ಧ ಗುಡುಗಿದ್ದರು. ಚುನಾವಣೆಯಲ್ಲಿ ಪ್ರದೀಷ್ ಈಶ್ವರ್ ಗೆಲುವು ಚಿಕ್ಕಬಳ್ಳಾಪುರದ ಬಲಿಜ ಸಮುದಾಯಲ್ಲಿನ ನಾಯಕತ್ವ ಪಲ್ಲಟಕ್ಕೂ ಕಾರಣವಾಗಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆ ಜಮೀನು 'ಅಳತೆ'ಯ ಬಗ್ಗೆ ಚಿಕ್ಕಬಳ್ಳಾಪುರ ರಾಜಕೀಯ ವಲಯದಲ್ಲಷ್ಟೇ ಅಲ್ಲ, ಅರಳಿ ಕಟ್ಟೆಯಲ್ಲಿ ಕೂತು ಸಮಯ ಕಳೆಯುವ ಲೋಕದ ವಿಚಾರಗಳ ಚರ್ಚಾ ತಾಣ ಎನಿಸಿಕೊಂಡಿರುವ ಹೋಟೆಲ್, ಬಸ್ ನಿಲ್ದಾಣ ಹೀಗೆ ಎಲ್ಲೆಡೆ ಜನಸಾಮಾನ್ಯರ ವಲಯದಲ್ಲಿಯೂ ತೀವ್ರ ಕುತೂಹಲವನ್ನು ಉಂಟುಮಾಡಿದೆ.
ಇಂದು 42 ಎಕರೆ ಜಮೀನು ಅಳತೆ?
ಇಂದು ಅಂದರೆ ಬುಧವಾರ ಬೆಳಿಗ್ಗೆ 11 ಗಂಟೆಗೆ ತಾಲೂಕು ಕಂದಾಯ ಇಲಾಖೆಯ ಭೂ ದಾಖಲೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಚೊಕ್ಕಹಳ್ಳಿ , ಗ್ರಾಮದ ಸರ್ವೇ ನಂಬರ್ 16 ರ ಅಳತೆ ಕಾರ್ಯ ಮಾಡಲಿದ್ದಾರೆ. ತಾಲ್ಲೂಕು ಭೂಮಾಪಕ ಶಾಂತಪ್ಪ ಆಗಸರ್ ರವರು ಅಳತೆ ಕೆಲಸ ಪೂರ್ಣಗೊಳಿಸಿ ಕಚೇರಿಗೆ ವರದಿ ಸಲ್ಲಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.
ಅಳತೆ ವೇಳೆ ಆಗಲಗುರ್ಕಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸದರಿ ಗ್ರಾಮದ ಆಡಳಿತಾಧಿಕಾರಿ ಮತ್ತು ರಾಜಸ್ವನಿರೀಕ್ಷಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಪರ್ಯಾವೇಕ್ಷಕರು ಖುದ್ದು ಹಾಜರಿರಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಲಾಗಿದೆ.
'ಅಳತೆಗೆ ಬಂದಾಗ ಆ ಜಾಗದ ಬಗ್ಗೆ ಪೂರ್ಣ ಮಾಹಿತಿ ದೊರೆಯಲಿದೆ. ಈಗ ನಮಗೆ ಏನೂ ಗೊತ್ತಿಲ್ಲ. ಮೇಲಧಿಕಾರಿಗಳು ಸಹ ಸ್ಥಳದಲ್ಲಿ ಹಾಜರಿರುವರು. ಈ ಸರ್ವೆ ನಂಬರ್ ದೊಡ್ಡ ವಿಸ್ತೀರ್ಣ ಹೊಂದಿದೆ. ಉತ್ತರಕ್ಕೆ ಆಗಲಗುರ್ಕಿ ಗಡಿಯಿಂದ ಜಮೀನು ಆರಂಭವಾಗುತ್ತದೆ. ಜಿಗ್ ಜಾಗ್ ರೀತಿಯಲ್ಲಿ ಜಮೀನು ಇದೆ. ಹಾಗಾಗಿ ಎಲ್ಲಿಯ ತನಕ ಜಮೀನು ಬರುತ್ತದೆ ಎಂದು ನಮಗೂ ತಿಳಿದಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications