ಚಿಕ್ಕಬಳ್ಳಾಪುರದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿದೆ "ಈ" ಮ್ಯಾನ್‌ಹೋಲ್, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ರೊಚ್ಚಿಗೆದ್ದ ಜನ
ಚಿಕ್ಕಬಳ್ಳಾಪುರ, ಫೆಬ್ರವರಿ, 08: ಸಮರ್ಪಕ ನಿರ್ವಹಣೆಯಿಲ್ಲದೆ ಯುಜಿಡಿ ಮ್ಯಾನ್‌ಹೋಲ್ ಹಾನಿಯಾಗಿದ್ದು, ಇದರಿಂದ ಜನರು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಬೇಸತ್ತ ಜನರು ಬೇಜವಾಬ್ದಾರಿ ನಗರಸಭೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಇದು ಮತ್ತಷ್ಟು ಸಮಸ್ಯೆ ಉದ್ಭವಿಸಲು ಕಾರಣವಾಗಿದೆ.
ನಗರದ ವಾಪಸಂದ್ರ ಬಡಾವಣೆ ಈಗಾಗಲೇ ಮೂಲಭೂತ ಸೌಲಭ್ಯಗಳಿಂದ ವಂಚನೆಗೆ ಒಳಗಾಗಿದೆ. ಕುಡಿಯುವ ನೀರು, ಸ್ವಚ್ಚತೆ, ಯುಜಿಡಿ, ಬೀದಿದೀಪಗಳ ಸಮಸ್ಯೆಗಳಿಂದ ಇಲ್ಲಿನ ನಿವಾಸಿಗಳು ಕಾಲ ಕಳೆಯಬೇಕಾಗುತ್ತಿದೆ. ರಸ್ತೆಯ ಮಧ್ಯದಲ್ಲಿ ಯುಜಿಡಿ ಹಾನಿಯಾಗಿದ್ದು, ಇದು ಅಪಾಯಕ್ಕೆ ಆಹ್ವಾನಿಸುತ್ತಿದೆ.
ನಗರದಲ್ಲಿ ಹಿಂದೆ ಸುರಿದ ಅಧಿಕ ಮಳೆಯಿಂದ ರಾಜಕಾಲುವೆಯ ಮಳೆ ನೀರು ಮನೆ, ಸಂಪು ಹಾಗೂ ರೈತರ ತೋಟಗಳೊಳಗೆ ನುಗ್ಗಿತ್ತು. ಈ ಸಮಸ್ಯೆಯಿಂದ ದೂರವಾಗುವ ಮುನ್ನವೇ ಯುಜಿಡಿ ಸಮಸ್ಯೆ ಎದುರಾಗಿದೆ. ಮ್ಯಾನ್‌ಹೋಲ್ ಹಾನಿಯಾಗಿದ್ದು, ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲಿಂದ ಖಾಲಿ ನಿವೇಶನ, ಬೆಂಗಳೂರು-ಹೈದರಬಾದ್ ರಾಷ್ಟ್ರೀಯ ಹೆದ್ದಾಗಿ ಕೆಳ ಸೇತುವೆಯ ಕಳಗಡೆ ನೀರು ಶೇಖರಣೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಸಂಚರಿಸಲು ತೀವ್ರ ಸಮಸ್ಯೆ ಎದುರಾಗಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ರಮ ಕೈಗೊಳ್ಳದ ಬೇಜವಾಬ್ದಾರಿ ಅಧಿಕಾರಿಗಳು
ರಸ್ತೆ ಮೂಲಕ ಮಂಚನಬಲೆ, ದಿಬ್ಬೂರು ಕಡೆಗೆ ಹೋಗುವ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದು, ರೈತರು ಹೂವು, ತರಕಾರಿಯನ್ನು ಮಾರುಕಟ್ಟೆಗೆ ತರಬೇಕಾದರೆ ಇದೇ ರಸ್ತೆ ಮೂಲಕವೇ ಬರಬೇಕು. ಕೊಳಚೆ ನೀರಿನಿಂದ ತರಕಾರಿ, ಹೂವಿನ ಬೆಳೆ ನಾಶವಾಗುವ ಭೀತಿಯಿಂದ ರೈತರು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗಿದೆ.

ಅಧಿಕಾರಿಗಳ ನಿರ್ಲಕ್ಷ, ಜನರಿಗೆ ಆಪತ್ತು
ಬಡಾವಣೆಯಲ್ಲಿ ಗ್ಯಾರೇಜ್, ಕಾಂಡಿಮೆಂಟ್ಸ್, ಹೋಟೆಲ್‌ಗಳು ಇದ್ದು ಯುಜಿಡಿ ಸಮಸ್ಯೆಯಿಂದ ವ್ಯಾಪಾರವಾಗುತ್ತಿಲ್ಲ. ಇದರಿಂದಾಗಿ ವ್ಯಾಪಾರ ಕಸಿಯುತ್ತಿದೆ. ಯುಜಿಡಿ ಹಾನಿಯಾಗಿರುವ ಬಗ್ಗೆ ನಗರಸಭೆಯ ಆರೋಗ್ಯ ನಿರೀಕ್ಷಕರು ಮತ್ತು ನಗರಸಭೆ ಸದಸ್ಯರ ಗಮನಕ್ಕೆ ತಂದಿದ್ದರು ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಈ ರಸ್ತೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ದ್ವಿಚಕ್ರ ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿರುತ್ತವೆ. ಹಾಗೆಯೇ ವಾಟರ್ ಟ್ಯಾಂಕರ್ ಹೋಲ್‌ನಲ್ಲಿ ಕುಸಿದು ಚಾಲಕ ಪರಡಿದ ಘಟನೆಯೂ ನಡೆದಿದೆ.
ವಾಪಸಂದ್ರ ಬಡಾವಣೆಯು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸೊರಗುತ್ತಿದೆ. ನೀರು ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯಲ್ಲಿ ನಗರಸಭೆಯಿಂದ ಕೊರೆಸಲಾಗಿರುವ ಕೊಳವೆ ಬಾವಿಗಳನ್ನು ನಿರ್ವಹಣೆ ಮಾಡದ ಕಾರಣ ಕೆಟ್ಟು ಹೋಗಿವೆ. ರಸ್ತೆಯಲ್ಲಿರುವ ಕೊಳವೆ ಬಾವಿಗೆ ಪಂಪು, ಮೋಟಾರು ಅಳವಡಿಸಲಾಗಿದೆ. ನೀರಿನ ಇಳುವರಿ ಉತ್ತಮವಾಗಿದರೂ, ಕೊಳವೆ ಬಾವಿಗೆ ಖಾಸಗಿ ವಾಹನಗಳು ಡಿಕ್ಕಿ ಹೊಡೆದು ಹಾನಿ ಮಾಡಿವೆ.

ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಯಾವುದೇ ಒಂದು ನಗರದಲ್ಲಿ ಯುಜಿಡಿ ಅಳವಡಿಸಬೇಕಾದರೆ ಮೊದಲು ವ್ಯವಸ್ಥಿತವಾಗಿ ಅಧ್ಯಯನ ನಡೆಸಿ ನೀಲನಕ್ಷೆ ತಯಾರಿಸಬೇಕಾಗುತ್ತದೆ. ಬಡಾವಣೆಯ ಜನಸಂಖ್ಯೆಗೆ ಅನುಗುಣವಾಗಿ ಮಾರ್ಗದ ಪೈಪ್‌ಗಳ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾರ್ಗ ನಿರ್ಮಿಸಲಾಗುತ್ತದೆ. ಯುಜಿಡಿ ನಿರ್ಮಿಸುವಾಗ ಈ ಅಂಶಗಳನ್ನು ಸಂಬಂಧಪಟ್ಟವರು ಗಂಭೀರವಾಗಿ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಡಿಶಾಪ ಹಾಕುತ್ತಿರುವ ಸ್ಥಳೀಯರು
ಬಡಾವಣೆಯಲ್ಲಿ ರಸ್ತೆ, ನೀರು, ಸ್ವಚ್ಛತೆ, ಚರಂಡಿ, ಬೀದಿದೀಪ ಸಮಸ್ಯೆಯಿದೆ. ಈ ಬಗ್ಗೆ ನಗರಸಭೆಯ ಚುನಾಯಿತ ಮಂಡಳಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಲವು ದಿನಗಳಿಂದ ಯುಜಿಡಿ ಹಾನಿಯಾಗಿದ್ದು, ರಸ್ತೆಯಲ್ಲಿ ವಾಹನಗಳು ಸಂಚರಿಸಲು ಆಗುತ್ತಿಲ್ಲ. ಇದರಿಂದಾಗಿ ಏನೇ ಅಪಾಯ ಸಂಭವಿಸಿದರೂ, ಅದಕ್ಕೆ ನಗರಸಭೆ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಸ್ಥಳೀಯರು ಶಾಪ ಹಾಕುತ್ತಿದ್ದಾರೆ.
ಒಳ ಚರಂಡಿ ಮಾರ್ಗವನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ನಗರಸಭೆಯ ಇಂಜಿನಿಯರ್‌ಗಳು, ಜಲಮಂಡಳಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಸಡ್ಡೆಯಿಂದಾಗಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯ ರಮೇಶ್ ಆಗ್ರಹಿಸಿದ್ದಾರೆ. ಹಾಗೆಯೇ ತ್ಯಾಜ್ಯ ನೀರಿನ ದುರ್ವಾಸನೆ ರಸ್ತೆ ಬದಿಯ ಅಂಗಡಿಮುಗ್ಗಟ್ಟುಗಳ ಜನರಲ್ಲಿ ತಲೆನೋವು ತರಿಸುತ್ತದೆ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಇಲ್ಲಿನ ಅಂಗಡಿಗಳ ಬಾಗಿಲು ಮುಚ್ಚ ಬೇಕಾಗುತ್ತದೆ ಎಂದು ಸ್ಥಳೀಯ ಅಂಗಡಿ ವ್ಯಾಪಾರಿ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications