ವಿಡಿಯೋ; ಚಿಕ್ಕಬಳ್ಳಾಪುರದಲ್ಲಿ ಕೋಡಿಶ್ರೀ ಭವಿಷ್ಯ
ಚಿಕ್ಕಬಳ್ಳಾಪುರ, ಫೆಬ್ರವರಿ 11; " ಕೋವಿಡ್ ಮಹಾಮಾರಿಯ ಶಕ್ತಿ ಕುಂದಿದ್ದು ಎಲ್ಲವೂ ಸರಿ ಹೋಗಲಿದೆ. ಆದರೆ ಗಾಳಿ ಗಂಡಾಂತರದಿಂದ ಜನತೆ ನರಳುತ್ತಾರೆ" ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದರು.
ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ಸ್ವಾಮೀಜಿ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದರು. "ಕೊರೊನಾ ಪೂರ್ವದಲ್ಲಿಯೇ ನಾನು ಹೇಳಿದ್ದೆ, ಸಂಕಟ ಬಂದಾಗ ವೆಂಕಟರಮಣ ಎನ್ನುವ ಜನರಿಗೆ ಬುದ್ದಿ ಕಲಿಸಬೇಕೆನ್ನುವ ಕಾರಣಕ್ಕಾಗಿಯೇ ಕೊರೊನಾ ದೇವರನ್ನು ಹಿಡಿದುಕೊಂಡು ಭೂಮಿಗೆ ಬಂತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು" ಎಂದರು.
"ಕೊರೊನಾ ಅಬ್ಬರ ಎಷ್ಟಿತ್ತು ಎನ್ನುವುದಕ್ಕೆ ದೇವಾಲಯಗಳು ಬಾಗಿಲು ಮುಚ್ಚಿದ್ದೇ ಸಾಕ್ಷಿಯಾಗಿದೆ. ತಿರುಪತಿ, ಧರ್ಮಸ್ಥಳ, ಚಾಮುಂಡೇಶ್ವರಿ ದೇವಾಲಯ ಬಾಗಿಲು ಹಾಕಿಸಿತು. ಮಠ ಮಾನ್ಯಗಳು ಬಾಗಿಲು ಹಾಕುವಂತೆ ಆಯಿತು" ಎಂದು ಹೇಳಿದರು.
"ಕೊರೊನಾ ಅಬ್ಬರ ತಗ್ಗಿತು ಎನ್ನುವಾಗ ನೆಲಗಂಡಾಂತರ ಪ್ರಾರಂಭವಾಗಿ ಏಕಶಿಲಾ ಪರ್ವತವಾದ ನಂದಿಗಿರಿಧಾಮದ ನೆಲವೇ ಕುಸಿಯಿತು. ಮಲೆಮಹದೇಶ್ವರ ಬೆಟ್ಟ, ಮಡಿಕೇರಿ ಮೊದಲಾದೆಡೆ ಸಮಸ್ಯೆ ಎದುರಾಯಿತು. ಇದರ ಜತೆಗೆ ಜಲಗಂಡಾಂತರವೂ ಸಹ ಜನಜಾನುವಾರು ಸಹಿತ ಸಕಲ ಜೀವರಾಶಿಯನ್ನು ಹಿಂಡಿ ಹಿಪ್ಪೆ ಮಾಡಿತು" ಎಂದು ತಿಳಿಸಿದರು.

"ಮುಂದೆ ಗಾಳಿ-ಗಂಡಾಂತರ ಬಂದು ಜನರನ್ನು ಬಾಧಿಸಲಿದೆ. ಗಾಳಿಗಂಡಾಂತರವೂ ಕೂಡ ಮನುಷ್ಯನಿಗೆ ಅಪಾಯಕಾರಿ ನೆಲೆಯಲ್ಲಿಯೇ ಬಂದು ಕಷ್ಟವನ್ನು ತಂದರೂ ಮುಂದೆ ಹೋಗಲಿದೆ. ಆದರೆ ಇದು ಹೋಗುವ ಕಾಲಕ್ಕೆ ವಿಪರೀತ ಬರಗಾಲವನ್ನು ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿಯನ್ನು ತಂದೊಡ್ಡಲಿದೆ" ಎಂದು ಹೇಳಿದರು.












Click it and Unblock the Notifications