ಗೃಹಲಕ್ಷ್ಮಿ ನೋಂದಣಿಗೆ ಇರಬೇಕಾದ ದಾಖಲೆಗಳೇನು? ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ
ಚಿಕ್ಕಬಳ್ಳಾಪುರ, ಜುಲೈ 21: ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ.
ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ದಿನಾಂಕ:19.07.2023 ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ 08 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹಫಲಾನುಭವಿಗಳು ಈ ಕೆಳಕಂಡ ವಿವರಗಳಂತೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಯ ನೋಂದಣಿ ದಿನಾಂಕ:19-07-2023 ರಿಂದ ಆರಂಭಿಸಲಾಗುವುದು. ಈಗಾಗಲೇ ತಿಳಿಸಿರುವಂತೆ ಪಡಿತರಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿರತಕ್ಕದ್ದಲ್ಲ.
ಫಲಾನುಭವಿಯ ನೋಂದಣಿಯನ್ನು 2 ವಿಧಾನದಿಂದ ಮಾಡಿಸಬಹುದಾಗಿದೆ. ಮೊದಲನೆಯದಾಗಿ ಈಗಾಗಲೇ ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‌ಎಮ್‌ಎಸ್ ಮೂಲಕ ತಿಳಿಸಲಾಗುವುದು.
ಗ್ರಾಮಾಂತರ ಪ್ರದೇಶದಲ್ಲಿ ಅವರು ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರವಾಗಿರುತ್ತದೆ. ಹಾಗೆಯೇ ನಗರ ಪ್ರದೇಶದಲ್ಲಿ ಅವರ ಸಮೀಪವಿರುವ ಕರ್ನಾಟಕ-ಒನ್ ಬೆಂಗಳೂರು-ಒನ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಮಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳು ಕೇಂದ್ರವಾಗಿರುತ್ತದೆ.
ಎರಡನೇಯದಾಗಿ ಪರ್ಯಾಯವಾಗಿ ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೊಂದಾಯಿಸಿಕೊಳ್ಳಬಹುದು. ಪ್ರತಿಫಲಾನುಭವಿಯ ನೋಂದಣಿಗೆ ನಿಗದಿಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಗೆ ಕಾಲ್ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಮ್‌ಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ.
ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ- ಒನ್/ ಬಾಪೂಜಿಕೇಂದ್ರ/ ಕರ್ನಾಟಕ-ಒನ್/ ಬೆಂಗಳೂರು-ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿ ಕೊಳ್ಳಬಹುದಾಗಿದೆ.
ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ (ಆಧಾರ್ ನಂಬರ್ ರ್ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತು ಪಡಿಸಿ ಪರ್ಯಾಯ ಬ್ಯಾಂಕ್‌ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿರುತ್ತದೆ. ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ಈ ಎಲ್ಲಾ ಮಾಹಿತಿಯೊಂದಿಗೆ ಕೇಂದ್ರಕ್ಕೆ ಹಾಜರಾಗುವುದು.
ಗ್ರಾಮ್-ಒನ್ / ಬಾಪೂಜಿಕೇಂದ್ರ / ಕರ್ನಾಟಕ-ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರವನ್ನು ತದನಂತರ ತಮ್ಮ ಮನೆಗೆ ತಲುಪಿಸಲಾಗುವುದು.
ಮೇಲಿನಂತೆ ಪ್ರಜಾಪ್ರತಿನಿಧಿ ಮೂಲಕ ಅಥವಾ ಗ್ರಾಮ್-ಒನ್/ ಬಾಪೂಜಿ ಕೇಂದ್ರ/ ಕರ್ನಾಟಕ-ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ನೊಂದಾಯಿಸಿ ಕೊಂಡಲ್ಲಿ, ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ SMS ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನಿಸಲಾಗುವುದು. ಒಂದು ವೇಳೆ ಫಲಾನುಭವಿಯು ಗ್ರಾಮ್-ಒನ್ / ಬಾಪೂಜಿ ಕೇಂದ್ರ / ಕರ್ನಾಟಕ-ಒನ್ /ಬೆಂಗಳೂರು-ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಿದಲ್ಲಿ, ಆನಂತರ ಪ್ರಜಾಪ್ರತಿನಿಧಿ ಅವರ ಮನೆಗೆ ಭೇಟಿ ನೀಡಿ ನೊಂದಾಯಿಸಲು ಪ್ರಯತ್ನಿಸಿದರೆ. ಈಗಾಗಲೇ ನೊಂದಾಯಿಸಿರುವ ಮಾಹಿತಿ ವ್ಯಕ್ತವಾಗುತ್ತದೆ.
ಈಗಾಗಲೇ ಆಧಾರ್ ರ್ಜೋಡಣೆಯಾಗಿರು ವಫಲಾನುಭವಿಯ ಖಾತೆಗೆ ಮಾಹೆಯಾನ ರೂ.2000/-ಗಳನ್ನು ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗುವುದು. ಒಂದು ವೇಳೆ ಫಲಾನುಭವಿಗಳು ಇಚ್ಚಿಸಿದಲ್ಲಿ ಪರ್ಯಾಯ ಬ್ಯಾಂಕ್ ಖಾತೆಯನ್ನು ನೀಡಬಹುದಾಗಿರುತ್ತದೆ. ಸದರಿ ಬ್ಯಾಂಕ್ ಖಾತೆಗೆ ಮಾಹೆಯಾನ ರೂ.2000/-ಗಳನ್ನು ಆರ್.ಟಿ.ಜಿ.ಎಸ್. ಮೂಲಕ ಜಮೆ ಮಾಡಲಾಗುವುದು.
ಈ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸತಕ್ಕದ್ದಲ್ಲ. ಈಯೋಜನೆಯಡಿ ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಉಚಿತವಾಗಿರುತ್ತದೆ. ಈ ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಆದ್ದರಿಂದ ಒಂದು ವೇಳೆ ನಿಗದಿತ ದಿನಾಂಕ / ಸಮಯಕ್ಕೆ ನೊಂದಾಯಿಸಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಮುಂದೆ ಯಾವುದೇ ದಿನಾಂಕ / ಸಮಯದಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ವ್ಯಾಪ್ತಿಯ ಎಎವೈ ಹಾಗೂ ಬಿಪಿಎಲ್ ಪಡಿತರ ಚೀಟಿಗಳ ಆಧಾರದಲ್ಲಿ ಯಜಮಾನಿ ಮಹಿಳೆ ಎಂದು ನಮೂದು ಆಗಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮೀ ಯೋಜನೆಗೆ ಸೇರಲಿದ್ದಾರೆ. ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಾರ ಜಿಲ್ಲೆಯ 28,420 ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್, ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಒಟ್ಟು 2,79,968 ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಸಂಖ್ಯೆ ಒಟ್ಟು 27,029 ಕಾರ್ಡ್ ಸೇರಿ ಒಟ್ಟು 3,27,417 ಕಾರ್ಡ್‌ಗಳಿವೆ. ಆದರೆ, ಆ ಪೈಕಿ ಮಹಿಳಾ ಮುಖ್ಯಸ್ಥರ ಹೆಸರಲ್ಲಿರುವ ಪಡಿತರ ಚೀಟಿ ಗಳ ಲೆಕ್ಕಾಚಾರ ನೋಡಿದರೆ ಜಿಲ್ಲೆಯಲ್ಲಿಒಟ್ಟು 27,029 ಎಎವೈ ಕಾರ್ಡ್, 2,59,854 ಬಿಪಿಎಲ್, 12,794 ಎಪಿಎಲ್ ಕಾರ್ಡ್ ಸೇರಿ ಒಟ್ಟು 2,99,677 ಕಾರ್ಡ್‌ಗಳಿವೆ.












Click it and Unblock the Notifications