ನೀರು ಕಂಡ ಜಕ್ಕಲಮಡಗು ಜಲಾಶಯ: ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಅವಳಿ ನಗರಗಳ ಜನತೆಯ ತುಸು ನಿರಾಳ
ಚಿಕ್ಕಬಳ್ಳಾಪುರ ಮೇ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರ ಜನತೆಯ ಜೀವ ಜಲಕ್ಕೆ ಆಸರೆಯಾಗಿರುವ ಜಕ್ಕಲಮಡು ಜಲಾಶಯಕ್ಕೆ 5 ಅಡಿಗಳಷ್ಟು ನೀರು ಹರಿದು ಬಂದಿದೆ.
ಕಳೆದ ಒಂದೆರಡು ವಾರದಿಂದ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಮಳೆ ನೀರು ಹರಿಯುತ್ತಿದ್ದು, ಬರಿದಾಗುವತ್ತ ಸಾಗಿದ್ದ ಜಲಾಶಯದ ಒಡಲಿಗೆ ಮಳೆರಾಯ ತುಸು ನೀರುಣಿಸಿದ್ದಾರೆ.

ಜಲಾಶಯ ಬರಿದಾಗಲಿದ್ದು, ಮುಂದಿನ ದಿನಗಳಲ್ಲಿ ಅವಳಿ ನಗರಗಳಾದ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಜನರ ಕುಡಿವ ನೀರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ತುಸು ದೂರವಾದಂತಾಗಿದೆ.
ಕೈ ಕೊಟ್ಟ ಮಳೆ:
ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಜಕ್ಕಲಮಡುಗು ಜಲಾಶಯದಲ್ಲಿ ಗಣನೀಯಮಟ್ಟದಲ್ಲಿ ನೀರು ಕುಸಿತ ಕಂಡಿತ್ತು. ಇದರಿಂದ ಜಲಾಶಯವನ್ನೇ ಅವಲಂಬಿಸಿರುವ ಎರಡೂ ನಗರಗಳ ನಿವಾಸಿಗಳಿಗೆ ಸಹಜವಾಗಿ ಆತಂಕ ಎದುರಾಗಿತ್ತು,
ಕುಡಿವ ನೀರು ಪೂರೈಸುವ ನಗರ ಸಭೆ ಅಧಿಕಾರಿಗಳು ಚಿಂತೆಗೀಡಾಗಿದ್ದರು. ಏತನ್ಮಧ್ಯೆ ಕೆಲ ದಿನಗಳಿಂದ ಸುರಿದ ಮಳೆಗೆ ನೀರಿನ ಹರಿವು ಹೆಚ್ಚಾಗಿರುವುದು ನೆಮ್ಮದಿ ತರಿಸಿದೆ.

ಉಭಯ ಪಟ್ಟಣಗಳಿಗೆ ಹಂಚಿಕೆ:
ಜಕ್ಕಲಮಡು ಜಲಾಶಯ ಸಂಗ್ರಹಣಾ ಸಾಮರ್ಥ್ಯ 4390 ದಶಲಕ್ಷ ಲೀಟರ್, ಶೇಖರಣಾ ವಿಸ್ತಿರ್ಣ 51.25 ಚ.ಮೀ. ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಶೇ.68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ. ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ಕೋಡಿ ಹರಿಯುತ್ತದೆ. ಹಲವು ಮಳೆಗಾಲದಲ್ಲಿ ಜಲಾಶಯ ಕೋಡಿ ಹರಿದಿದೆ.
ಜಕ್ಕಲಮಡು ಜಲಾಶಯ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ ಈ ಜಲಾಶಯಕ್ಕೆ ನೆರೆಯ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಮಳೆ ನೀರು ಹರಿದು ಬರುವ ಕಾರಣಕ್ಕೆ ಜಕ್ಕಲಮಡು ಜಲಾಶಯದ ನೀರಿನಲ್ಲಿ ತಮಗೂ ಪಾಲುಬೇಕೆಂದು ದೊಡ್ಡಬಳ್ಳಾಪುರ ಜನತೆ ಬೇಡಿಕೆ ಇಟ್ಟ ಪರಿಣಾಮ ಜನಸಂಖ್ಯೆಗೆ ಅನುಗುಣವಾಗಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಉಭಯ ನಗರಗಳಿಗೆ ಈ ಜಲಾಶಯದ ನೀರಿನ ಹಂಚಿಕೆ ಮಾಡಲಾಗಿದೆ.
ಜಕ್ಕಲಮಡುಗು ಜಲಾಶಯದ ಸಾಮಾರ್ಥ್ಯ:
ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರದ ಜನರಿಗೆ ಕುಡಿಯುವ ನೀರು ಒದಗಿಸಲು ಜಲಾಶಯದ ಕಾಮಗಾರಿಗೆ 2249.68 ಲಕ್ಷ ವೆಚ್ಚ ಮಾಡಲಾಗಿದೆ. ಜಲಾಶಯ ಸಂಗ್ರಹಣಾ ಸಾಮಥ್ರ್ಯ 4390 ದಶಲಕ್ಷ ಲೀ, ಗರಿಷ್ಠ ಸಂಗ್ರಹಣಾ ನೀರಿನ ಮಟ್ಟ 819.37 ಮೀ, ನೀರು ಶೇಖರಣಾ ವಿಸ್ತೀರ್ಣ 51.25 ಚ.ಮೀ ಹೊಂದಿದೆ. ಜಲಾಶಯ 42 ಅಡಿಯಷ್ಟು ಎತ್ತರ ನೀರು ತುಂಬಲಿದ್ದು, ಇದರಲ್ಲಿ 2 ಅಡಿಯಷ್ಟು ಡೆಡ್ ಸ್ಟಾಕ್ ನೀರು ಇರಲಿದೆ.
22 ಅಡಿಗೆ ಕುಸಿದಿತ್ತು:
ಜಕ್ಕಲಮಡು ಜಲಾಶಯ 64 ಅಡಿಗಳವರೆಗೆ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ ಮಳೆ ಕೊರತೆಯಿಂದ ಡೆಡ್ ಸ್ಟೋರೆಜ್ ಸೇರಿ ನೀರಿನ ಮಟ್ಟ 22 ಅಡಿಗೆ ಕುಸಿದಿತ್ತು. ಮಳೆ ನೀರಿನಿಂದ ಇದೀಗ 24ರಿಂದ 26ಅಡಿಗಳವರೆಗೆ ನೀರಿನ ಮಟ್ಟ ಏರಿಕೆ ಕಂಡಿದೆ.
ಇಷ್ಟು ಮಟ್ಟದ ನೀರು ಶೇಖರಣೆಯಾಗಿರುವುದರಿಂದ ಸುಮಾರು 1 ತಿಂಗಳವರೆಗೆ ಎರಡೂ ನಗರಗಳಿಗೆ ನೀರು ಪೂರೈಸಲು ತೊಂದರೆಯಾಗುವುದಿಲ್ಲ ಎಂಬುದು ನಗರಸಭೆ ಅಧಿಕಾರಿಗಳ ಸಮಾಧಾನವಾಗಿದೆ.
ಇದರ ನಡುವೆ ಇನ್ನು ಕೆಲವು ದಿನ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿ ಹಾಗೂ ಮುಂದಿನ ಮಳೆಗಾಲದಲ್ಲಿ ನಿರೀಕ್ಷಿತ ಮಳೆಯಾಗಲಿದೆ ಎಂಬ ಭರವಸೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬುದು ಜನರ ಆಶಾಭಾವನೆಯಾಗಿದೆ.












Click it and Unblock the Notifications