ಪ್ರಾಮಾಣಿಕ ಕಾರ್ಯಕರ್ತರ ಕಡೆಗಣನೆ: ಸಿಪಿಐಎಂ ಪಕ್ಷಕ್ಕೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖಂಡರು
ಚಿಕ್ಕಬಳ್ಳಾಪುರ, ಮಾರ್ಚ್ 28: ಅನಿಲ್ ಕುಮಾರ್ ಸಿಪಿಐಎಂ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷದ ಮುಖಂಡರು ಕಡೆಗಣಿಸಿರುವ ಕಾರಣ ಸಿಪಿಐಎಂ ಪ್ರಾಥಮಿಕ ಸದಸ್ಯತ್ವ ಮತ್ತು ಹುದ್ದೆಗಳಿಗೆ ರಾಜೀನಾಮೆ ನೀಡಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ರೆಡ್ಡಿ ಪ್ರಕಟಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ.ಅನಿಲ್ ಕುಮಾರ್ ಪಕ್ಷ ಸೇರ್ಪಡೆಯಾದ ನಂತರ ಜಿ.ವಿ.ಶ್ರೀರಾಮರೆಡ್ಡಿ ಹಾಗೂ ಬೆಂಬಲಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರ ವಿರುದ್ಧ ರಾಜ್ಯ, ಕೇಂದ್ರ ಸಮಿತಿಗಳಿಗೆ ದೂರು ನೀಡಿದ್ದರು ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಿಲ್ ಕುಮಾರ್ ಹಿಂದೆ ಜಿ.ವಿ.ಶ್ರೀರಾಮರೆಡ್ಡಿಯವರ ವಿರುದ್ಧ ರಾಜ್ಯ ಸಮಿತಿಗೆ ದೂರುಗಳು ನೀಡಿದಾಗ ಕೂಡಲೇ ಸ್ವೀಕರಿಸಿ ಪಕ್ಷದಿಂದ ಅನರ್ಹಗೊಳಿಸಿದರು. ಅವರು ಬಹು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರಾಗಿದ್ದು ಮತ್ತೆ ಸಿಪಿಐಎಂಗೆ ವಾಪಸ್ ಕರೆಸುತ್ತಾರೆ ಎನ್ನುವ ಭಾವನೆಯಿಂದ ಜಿವಿಎಸ್ ಬೆಂಬಲಿಗರೆಲ್ಲ ಪಕ್ಷದಲ್ಲಿ ಮುಂದುವರೆದೆವು. ಅನಿಕ್ ಕುಮಾರ್ ಅನುಚಿತ ವರ್ತನೆಯ ವಿರುದ್ಧ ದೂರು ನೀಡಿದರು ಯಾವುದೇ ರೀತಿ ಕ್ರಮಕೈಗೊಳ್ಳದೆ ವಿನಾಕಾರಣಗಳನ್ನು ಹೇಳಿಕೊಂಡು ಮುಂದುವರೆಸಿಕೊಂಡು ಬಂದರು. ಇದು ಪ್ರಾಮಾಣಿಕ ಕಾರ್ಯಕರ್ತರ ಮನಸ್ಸಿಗೆ ನೋವಾಗಿದ್ದು ರಾಜೀನಾಮೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
2005ರಲ್ಲಿ ಪಕ್ಷಕ್ಕೆ ಬಂದ ಅನಿಲ್ ಕುಮಾರ್ ಕಡಿಮೆ ಅವಧಿಯಲ್ಲೇ ಉನ್ನತ ಸ್ಥಾನಗಳನ್ನು ಗಳಿಸಿ ಹಿರಿಯರನ್ನು ಮೂಲೆಗುಂಪು ಮಾಡಿದರು. ಜಿ.ಪಂ, ತಾ.ಪಂ, ಗ್ರಾ.ಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರು. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳೊಂದಿಗೆ ಶಾಮೀಲಾಗಿದ್ದರು. ಈ ಎಲ್ಲದರ ವಿರುದ್ಧ ಸಾಕ್ಷಿ ಸಮೇತ ರಾಜ್ಯ ಸಮಿತಿಗೆ ದೂರು ನೀಡಿದರೂ ಯಾವುದೇ ರೀತಿ ಪ್ರಯೋಜನೆಯಾಗಲಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಿಪಿಐಎಂ ನೀರಾವರಿ, ಭೂಮಿ, ಕಾರ್ಮಿಕರ ಪರ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿಕೊಂಡು ಬಂದಿದೆ. ಅದೇ ರೀತಿ ಸಂಘಟನೆಯಲ್ಲೂ ಮುಂದಿದೆ. ಅನಿಲ್ ಕುಮಾರ್ ಟಿಕೆಟ್ ಘೋಷಣೆ ಮಾಡುವ ಮುನ್ನ ಸ್ಥಳೀಯ ಮುಖಂಡರದೊಂದಿಗೆ ಚರ್ಚಿಸಿಲ್ಲ, ಅವರ ಬಳಿ ದುಡ್ಡು ಇದೆ ಎಂಬ ಕಾರಣಕ್ಕೆ ಮಣೆ ಹಾಕಿರುವುದು ಸರಿಯಲ್ಲ. ಪಕ್ಷದ ಹೋರಾಟಗಳಿಗೆ, ಸಿದ್ಧಾಂತಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ ರೆಡ್ಡಿ ಮಾತನಾಡಿ, ಸುಮಾರು ದಶಕಗಳ ಕಾಲ ಸಿಪಿಐಎಂ ಪಕ್ಷವನ್ನು ಕಟ್ಟಿ ಹೋರಾಟಗಳನ್ನು ನಡೆಸಿದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪಕ್ಷ ವಿರೋಧಿಗಳಿಗೆ ಟಿಕೆಟ್ ಘೋಷಣೆ ಮಾಡಿರುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಘೋಷಣೆಗೂ ಮುಂಚೆ ಯಾವುದೇ ರೀತಿ ಚರ್ಚೆಗಳನ್ನು ನಡೆಸಿಲ್ಲ. ಅನಿಲ್ ಕುಮಾರ್ ಸೂಕ್ತ ವ್ಯಕ್ತಿಯಲ್ಲ ಎಂದು ಪಕ್ಷದ ಹಿರಿಯರ ಗಮನಕ್ಕೆ ತರಲಾಗಿದೆ. ಹೋರಾಟಗಳಿಗೆ, ಪಕ್ಷಕ್ಕೆ ಧಕ್ಕೆಯುಂಟು ಪ್ರಯತ್ನ ಅನಿಲ್ ಕುಮಾರ್ ಮಾಡುತ್ತಿದ್ದಾರೆ. ಇದು ಸಿಪಿಎಂ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪಕ್ಷದ ರಾಜ್ಯ ಸಮಿತಿ ವರ್ತನೆಯೂ ನಮ್ಮ ರಾಜೀನಾಮೆಗೆ ಕಾರಣ ಎಂದು ಗುಡುಗಿದರು.
ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಬಲಿಷ್ಠವಾಗಿದೆ. ಜಿವಿಎಸ್ ಸೇರಿದಂತೆ ಅವರ ಬೆಂಬಲಿಗರು ಪಕ್ಷವನ್ನು ಸಂಘಟಿಸಿದ್ದಾರೆ. ಜಿವಿಎಸ್ ನಿಧನದ ನಂತರವೂ ನಾವೆಲ್ಲ ಹೋರಾಟಗಳಲ್ಲಿ ತೊಡಗಿಸಿಕೊಂಡು ಸರ್ಕಾರಗಳ ವಿರುದ್ಧ ಹೋರಾಟ ನಡೆಸಿದ್ದೇವೆ. ಇದು ಯಾವುದಕ್ಕೂ ಅನಿಲ್ ಕುಮಾರ್ ಬೆಂಬಲ ನೀಡಿಲ್ಲ. ಸೂಕ್ತವಲ್ಲದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಗುಡಿಬಂಡೆ ಕೊಚಿಮುಲ್ ನಿರ್ದೇಶಕ ಆದಿ ನಾರಾಯಣರೆಡ್ಡಿ, ಹಳೇ ಗುಡಿಬಂಡೆ ಎಚ್.ಪಿ.ಲಕ್ಷ್ಮೀನಾರಾಯಣರೆಡ್ಡಿ, ಪೋಲಂಪಲ್ಲಿ ಪಿ.ಸಿ.ಮಂಜುನಾಥ್ ಸಿಪಿಎಂ ಪ್ರಾಥಮಿಕ ಸದಸ್ಯತ್ವ ಮತ್ತು ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಮುಖಂಡರಾದ ಮಹಮ್ಮದ್ ಅಕ್ರಂ, ಆದಿನಾರಾಯಣ ರೆಡ್ಡಿ, ರವಿಚಂದ್ರ ರೆಡ್ಡಿ ಮತ್ತಿತರು ಹಾಜರಿದ್ದರು.












Click it and Unblock the Notifications