ಬಿಜೆಪಿ ಜೊತೆಗಿಗ ಜೆಡಿಎಸ್ ದೋಸ್ತಿಗೆ ಮೂಡದ ಒಮ್ಮತ : ಅನ್ಯ ಪಕ್ಷಗಳತ್ತ ಚಿಕ್ಕಬಳ್ಳಾಪುರ ಮುಖಂಡರ ಚಿತ್ತ

ಚಿಕ್ಕಬಳ್ಳಾಪುರ, ಅಕ್ಟೋಬರ್‌ 25: ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಹುತೇಕ ಕಡೆ ಸಮ್ಮತಿಯೂ ಸಿಕ್ಕಾಗಿದೆ. ಆದರೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಇನ್ನೂ ಸಮಾಲೋಚನೆಯ ಹಂತದಲ್ಲೇ ಇದೆ. ಅಜೆಂಡಾ ಆಧಾರಿತ ಚರ್ಚೆಗಳು ಶುರುವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಹ ಮತ ಮೂಡದಿರಲು ಪ್ರಮುಖ ಕಾರಣ ಬಿಜೆಪಿ ಜೊತೆಗಿನ ಪ್ರಬಲ ಪೈಪೋಟಿಯೇ ಕಾರಣ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜೆಡಿಎಸ್ ಕಾರಣ ಎಂಬ ನೇರ ಆರೋಪಗಳು ಜೆಡಿಎಸ್ ಮುಖಂಡರನ್ನು ಮತ್ತಷ್ಟು ಕೆರಳಿಸಿವೆ.

jds-leaders-opposes-bjp-jds-alliance

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ಬಿಜೆಪಿ ಜೊತೆ ಹೋಗಲು ಸುತರಾಂ ತಯಾರಿಲ್ಲ. ಹೀಗಾಗಿ ಅಜೆಂಡಾ ಇಟ್ಟುಕೊಂಡು ಸಭೆಗಳು ನಡೆಯುತ್ತಿವೆ. ಅದರಲ್ಲಿ ಮೈತ್ರಿ ವಿಷಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಮುಖ ನಾಯಕರ ಚಿತ್ತ ಎತ್ತ ಎಂಬ ಕುತೂಹಲ ಮಾತ್ರ ಬಿಟ್ಟು ಕೊಟ್ಟಿಲ್ಲ.

ಅಜಿಂಡ ಆಧಾರಿತ ಚರ್ಚೆ..?

ಕಳೆದ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಮೈತ್ರಿ ಕುರಿತು ಗಂಭೀರ ಚರ್ಚೆ ನಡೆದಿತ್ತು. ಬಿಜೆಪಿ ಜೊತೆ ಮೈತ್ರಿಯಾದರೆ ಬಿಜೆಪಿ ಜೊತೆ ಹೋಗ ಬೇಕಾ?, ಮೈತ್ರಿ ಒಪ್ಪಿ ಒಟ್ಟಾಗಿ ಸಾಗಬೇಕಾ? ಇಲ್ಲ ಪಕ್ಷ ತೊರೆದು ಅನ್ಯ ಪಕ್ಷಕ್ಕೆ ಹೋಗಬೇಕಾ ಎಂಬುದರ ಬಗ್ಗೆ ಗಹನವಾದ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ಸಭೆಯಲ್ಲಿ ಯಾವ ಆಚೆಂಡಾಗೂ ಪೂರ್ಣ ಸಹಮತ ಸಿಗದೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ನಿರ್ಧಾರಕ್ಕೆ ಬಿಡಲಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವರಿಷ್ಠರ ಹಂತದಲ್ಲಿ ನಡೆದಿರುವ ಜೆಡಿಎಸ್‌ -ಬಿಜೆಪಿ ಮೈತ್ರಿಗೆ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಮುಖಂಡರಲ್ಲಿ ಮುನಿಸು ಈ ಕ್ಷಣದ ತನಕ ಮುಂದುವರಿದಿದೆ. ವರಿಷ್ಟರು ಮಧ್ಯಸ್ಥಿಕೆ ವಹಿಸಿದರೂ ಸ್ಥಳೀಯ ವೈರತ್ವ ಮರೆಸಲು ಸಾಧ್ಯವಾಗದಂತಾಗಿದ್ದು, ಜಿಲ್ಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಾಯಕರ ಮಾತಿನ ವರಸೆ ಹಾಗೂ ಚಲನ ವಲನ ಗಮನಿಸಿದರೆ ಜೆಡಿಎಸ್ ಪಕ್ಷ ಹರಿದು ಹಂಚಿಹೋಗುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ಪೈಪೋಟಿ ಇತ್ತು. ಆದರೆ ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಡಾ.ಕೆ.ಸುಧಾಕರ್ ಬಿಜೆಪಿಗೆ ಹಾರಿದ್ದರಿಂದ ಕಾಂಗ್ರೆಸ್-ಜೆಡಿಎಸ್ -ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಪ್ರದರ್ಶನ ನೀಡಿ ಮೂರನೇ ಸ್ಥಾನಕ್ಕಿಳಿದಿದೆ.

ಗಾಯದ ಮೇಲೆ ಬರೆ ಎಂಬಂತೆ ಈಗ ಬಿಜೆಪಿ ಜೊತೆ ಮೈತ್ರಿ ಮಾಡಿ ಕೊಂಡಿರುವುದು ಬಿಜೆಪಿ ಹಾಗೂ ಡಾ.ಕೆ. ಸುಧಾಕರ್ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದ ಕೆಲವು ಸ್ಥಳೀಯ ಜೆಡಿಎಸ್ ಮುಖಂಡರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಜೆಪಿಗೆ ಮೈತ್ರಿ ಓಕೆ, ಜೆಡಿಎಸ್‌ನಲ್ಲಿ ಆಕ್ಷೇಪ ಯಾಕೆ?

ಕೇಂದ್ರ ಮಟ್ಟದಲ್ಲಿ ನಡೆದಿರುವ ಮೈತ್ರಿಯನ್ನು ಬಿಜೆಪಿ ಪಕ್ಷದ ನಾಯಕರೆಲ್ಲ ಒಪ್ಪಿಕೊಂಡಿದ್ದಾರೆ . ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂಬ ಮಾತನ್ನು ಸಹ ಬಹಿರಂಗವಾಗಿಯೇ ಹೇಳಿಯಾಗಿದೆ. ಬಿಜೆಪಿ ಮುಖಂಡರಿಂದ ಹೇಳಿಕೊಳ್ಳುವಂತಹ ಅಸಮಾಧಾನ ಇಲ್ಲಿಯ ತನಕ ಕಾಣಿಸಿಲ್ಲ. ಆದರೆ ಜಾತ್ಯತೀತ ಜನತಾದಳ ಪಾಳಯದಲ್ಲಿ ಮಾತ್ರ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುವುದು ಮಾತ್ರವಲ್ಲ, ವಿರೋಧಿ ಬಣದ ಪರವಾಗಿ ಮಾತನಾಡುವ ಮೂಲಕ ತಮ್ಮೊಳಗಿನ ಅಸಮಾಧಾನ ಹೊರಹಾಕುತ್ತ ತಾವು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯವಾಗಿ ಈಗಾಗಲೇ ಒಂದು ಬಾರಿ ಆಕ್ಟೋಬರ್ 2ರಂದು ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಡೆದಿದ್ದ ಮುಖಂಡರ ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಮೃತಿಗೆ ಸಾಕಷ್ಟು ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತವಾಗಿ ಮೈತ್ರಿ ತೀರ್ಮಾನವನ್ನು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ತೀರ್ಮಾನಕ್ಕೆ ಬಿಡಲಾಗಿತ್ತು. ಹಾಗಾಗಿ ಮಾಜಿ ಶಾಸಕರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ವರಿಷ್ಠರು ತೆಗೆದುಕೊಂಡಿರುವ ಜೆಡಿಎಸ್ ಹಾಗೂ ಮೈತ್ರಿ ದೋಸ್ತಿಯ ಲಾಭ ನಷ್ಟ ನಿರ್ಧಾರವಾಗಲಿದೆ.

ದೋಸ್ತಿಗಿಲ್ಲ ಒಲವು

ಮೈತ್ರಿ ವಿಷಯ ಸಂಬಂಧ ಈಗಾಗಲೇ ಜೆಡಿಎಸ್‌ ವರಿಷ್ಠರಾದ ಎಚ್. ಡಿ. ದೇವೇಗೌಡ, ಮಾಜಿ ಸಿ.ಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ಬಿಜೆಪಿ ಜೊತೆಗಿನ ಸ್ಥಳೀಯ ವೈರತ್ವವನ್ನು ವಿವರಿಸಿ ಬಂದಿದ್ದಾರೆ. ಎಲ್ಲವನ್ನೂ ಸರಿಪಡಿಸುವ ಭರವಸೆಯನ್ನೂ ವರಿಷ್ಠರು ಕೊಟ್ಟಿದ್ದಾರೆ. ಆದರೆ ಬಿಜೆಪಿ- ಜೆಡಿಎಸ್‌ ಮೈತ್ರಿ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದ ಕೆ.ಪಿ.ಬಚ್ಚೇಗೌಡರ ನಿಲುವಿನಲ್ಲಿ ಯಾವುದೇ ಬದಲಾವಣೆ ಸದ್ಯದ ಮಟ್ಟಿಗೆ ಕಾಣುತ್ತಿಲ್ಲ.

ಶೀಘ್ರವೇ ಮೈತ್ರಿ ವಿಷಯ ಅಂತಿಮಗೊಳಿಸುವ ಸಂಬಂಧ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಕರೆಯಲಿರುವ ಮಾಜಿ ಶಾಸಕ ಬಚ್ಚೇಗೌಡರು, ಪಕ್ಷದ ವರಿಷ್ಟರ ಜೊತೆ ನಡೆದ ಮಾತುಕತೆ ಸಾರಾಂಶವನ್ನು ಸಭೆಯಲ್ಲಿ ವಿವರಿಸಲಿದ್ದಾರೆ. ಆಗ ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸುವ ಅಭಿಪ್ರಾಯದಂತೆ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಒಪ್ಪದಿದ್ದರೆ ಮುಂದೇನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಮೈತ್ರಿ ಒಪ್ಪಿದರೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಮಾತುಕತೆ ನಡೆಯಲಿದೆ.

ಬಿಜೆಪಿ ಜೊತೆ ದೋಸ್ತಿಗೆ ಜೆಡಿಎಸ್‌ನಿಂದ ವಿರೋಧ ಏಕೆ..?

ಜೆಡಿಎಸ್‌ಗೆ ಮೊದಲಿಂದಲೂ ಸ್ಥಳೀಯವಾಗಿ ಬಿಜೆಪಿ ಜೊತೆಗಿನ ಸಂಬಂಧ ಎಣ್ಣೆ ಸೀಗೆಕಾಯಿಯಂತೆ, ಅದರಲ್ಲೂ ಕಾಂಗ್ರೆಸ್‌ನಲ್ಲಿದ್ದಾಗ ಭಾರೀ ಪೈಪೋಟಿ ನೀಡುತ್ತಿದ್ದ ಡಾ.ಕೆ.ಸುಧಾಕರ್ ಬಿಜೆಪಿಗೆ ಹೋದ ನಂತರ ಕಟ್ಟಾ ಎದುರಾಳಿಯಾಗಿದ್ದಾರೆ. ಕಳೆದ 4 ಚುನಾವಣೆಗಳಲ್ಲೂ ಡಾ. ಕೆ. ಸುಧಾಕರ್ ಜೆಡಿಎಸ್ ವಿರುದ್ಧ ಸ್ಪರ್ಧೆಗಿಳಿದಿದ್ದರು ಹಾಗೂ ಆರೋಪ ಪ್ರತ್ಯಾರೋಪಗಳು ಸಹ ನಡೆದಿದ್ದವು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜೆಡಿಎಸ್‌ ಕಾರಣ ಎಂಬ ಆರೋಪವನ್ನು ಸಹ ಮಾಜಿ ಸಚಿವ ಡಾ. ಕೆ. ಸುಧಾಕರ್ ಫಲಿತಾಂಶದ ನಂತರ ಮಾಡಿದ್ದರು. ಮತ್ತೊಂದೆಡೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಕಿರುಕುಳ ಕೊಟ್ಟಿದ್ದಾರೆ. ಪಕ್ಷದ ಶಕ್ತಿ ಕುಂದಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಜೊತೆ ಮೈತ್ರಿ ಬೇಡವೇ ಬೇಡ ಎನ್ನುವುದು ಹಲವು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯವಾಗಿದೆ.

jds-leaders-opposes-bjp-jds-alliance

ಸ್ಥಳೀಯವಾಗಿ ಮೈತ್ರಿ ವಿಷಯ ಅಂತಿಮ ಆಗುವ ಮೊದಲೇ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್‌ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿರುವುದು ನಾನಾ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್‌ ಜೊತೆ ಗುರುತಿಸಿಕೊಂಡಿರುವ ಮುಖಂಡರು ಈಗ ಗೊಂದಲಕ್ಕೆ ಸಿಲುಕುವಂತಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾನಾ ಆಲೋಚನೆಗಳಲ್ಲಿ ತೊಡಗಿದ್ದಾರೆ.

ಅಸಮಾಧಾನಿತರಿಗೆ ಕೈ ಗಾಳ

ಬಿಜೆಪಿ ತೆಕ್ಕೆಯಲ್ಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳಲು ಈಗ ಮುಖಂಡರ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಜೆಡಿಎಸ್‌ ಮೈತ್ರಿಯಿಂದ ಬಿಜೆಪಿ ಪ್ರಬಲವಾಗುವ ಹಿನ್ನೆಲೆ ಕಾಂಗ್ರೆಸ್‌ಗೆ ಮುಖಂಡರನ್ನು ಸೆಳೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಮೈತ್ರಿಯಿಂದ ಅಸಮಾಧಾನಗೊಂಡಿರುವವನ್ನು ಸೆಳೆಯಲು ಈಗಾಗಲೇ ಕಾಂಗ್ರೆಸ್‌ ನಾನಾ ಕಸರತ್ತು ನಡೆಸಿದೆ. ಸದ್ಯಕ್ಕೆ ಜೆಡಿಎಸ್‌ ಸ್ಥಳೀಯವಾಗಿ ಕೈಗೊಳ್ಳುವ ಮೈತ್ರಿ ಕುರಿತ ತೀರ್ಮಾನ ಪಕ್ಷದ ಅಳಿವು-ಉಳಿವನ್ನು ನಿರ್ಧರಿಸಲಿದೆ.

ಮೈತ್ರಿ ಬಗ್ಗೆ ಮುಖಂಡರ ಮಾತೇನು..?

ಈ ಕುರಿತು ಮಾಜಿ ಜೆಡಿಎಸ್ ಪಕ್ಷದ ನಾಯಕರು ಮಾತನಾಡಿ ಸ್ಥಳೀಯವಾಗಿ ಬಿಜೆಪಿ ಜೊತೆಗಿನ ಮೃತಿಗೆ ವಿರೋಧ ಇರುವುದನ್ನು ವರಿಷ್ಠರ ಗಮನಕ್ಕೆ ತಂದು ಚರ್ಚೆ ನಡೆಸಲಾಗಿದೆ. ಈಗಾಗಲೇ ಮುಖಂಡರ ಸಭೆ ಕರೆದು ಮೈತ್ರಿ ಬಗ್ಗೆ ಚರ್ಚಿಸಿದ್ದು, ವರಿಷ್ಠರ ಜೊತೆಗೂ ಸಭೆಯ ಅಭಿಪ್ರಾಯವನ್ನು ತಿಳಿಸಲಾಗಿದೆ.

ಸ್ಥಳೀಯವಾಗಿ ಬಿಜೆಪಿ ಜತೆಗಿನ ಸಂಬಂಧವನ್ನು ವಿವರಿಸಲಾಗಿದೆ. ವರಿಷ್ಠರು ಎಲ್ಲವನ್ನೂ ಪರಿಹರಿಸುವ ಭರವಸೆ ನೀಡಿದ್ದಾರೆ. ದಸರಾ ಹಬ್ಬ ಮುಗಿದ ನಂತರ ಮತ್ತೊಮ್ಮೆ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಸೇರಲು ಈ ಹಿಂದೆಯೇ ತೀರ್ಮಾನ ಮಾಡಲಾಗಿತ್ತು. ಅಂದರಂತೆ ಸಭೆ ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಜಿಡಿಎಸ್ ಪಕ್ಷದ ಮಾಜಿ ಶಾಸಕರು ಹಾಗೂ ಕಳೆದ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ತಿಳಿಸಿದ್ದಾರೆ.

ಉಳಿದಂತೆ ಮಾಜಿ ಸಚಿವರು ಹಾಗೂ ಬಿಜೆಪಿ ಪಕ್ಷದ ನಾಯಕರಾದ ಡಾ.ಕೆ. ಸುಧಾಕರ್ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯವನ್ನು ತೀರ್ಮಾನ ಮಾಡಿದ್ದು, ಅದರಂತೆ ನಡೆದುಕೊಳ್ಳಬೇಕು. ಜನತಾದಳ ವಿರುದ್ಧವೇ ಆರಂಭದಿಂದಲೇ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೂ ನಾನು ಜೆಡಿಎಸ್‌ ವಿರುದ್ಧ ರಾಜಕಾರಣ ಮಾಡಿದ್ದೇನೆ. ಆದರೆ ಈಗಿನ ಸಂದಿಗ್ರ ಪರಿಸ್ಥಿತಿಯಲ್ಲಿ ವರಿಷ್ಠರು ಮೈತ್ರಿ ತೀರ್ಮಾನ ಮಾಡಿರುವುದರಿಂದ ಅದರಂತೆ ನಡೆದುಕೊಳ್ಳುತ್ತೇವೆ. ಪಕ್ಷದ ತೀರ್ಮಾನಕ್ಕೆ ತಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+