ಅಬ್ಬಾಬ್ಬ..! : ಚಿಕನ್-300ರೂ, ಮಟನ್-800ರೂಬಾಡೂಟ ಪ್ರಿಯರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಚಿಕ್ಕಬಳ್ಳಾಪುರ, ಜೂನ್ 27: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ರಣ ಬಿಸಿಲಿನಿಂದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವುದು ಕಡಿಮೆಯಾದ್ದರಿಂದ ತರಕಾರಿ ದರ ಏರಿಕೆಯಾಗಿದೆ. ಮತ್ತೊಂದೆಡೆ ಮಾಂಸಾಹಾರಗಳಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲ್ಪಡುವ ಕೋಳಿ ಮಾಂಸ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ಮುಟ್ಟಿದೆ.
ರಾಜ್ಯದಲ್ಲಿ ಹಿಂದೆಂದೂ ಕಾಣದಂತೆ ಮಾಂಸದ ಬೆಲೆ ಏರಿಕೆಯಾಗುತ್ತಲೇ ಇದ್ದು, ಬಾಡೂಟ ಪ್ರಿಯರಿಗೆ ಕೋಳಿ ಮಾಂಸ ಈಗ ಬಲು ದುಬಾರಿಯಾಗಿದೆ. ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಹಾಗೂ ಬೇಡಿಕೆ ಹೆಚ್ಚು ಜೊತೆಗೆ ಕೋಳಿ ಆಹಾರದ ಬೆಲೆ ಹೆಚ್ಚಳದ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸ ಪ್ರಿಯರಿಗೆ ಬಾರಿ ಹೊರೆಯಾಗಿ ಪರಿಣಮಿಸಿದೆ.

ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವವರು ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್ ದರವು ಈಗ ಪ್ರತಿ ಕೆಜಿಗೆ 280-300 ತನಕ ಏರಿಕೆಯಾಗಿದೆ. ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿದೆ. ಇದಕ್ಕೆಲ್ಲ ಕಾರಣ ಕೋಳಿ ಸಾಕಾಣಿಕೆಗೆ ಆಗುವ ಖರ್ಚು ಹಾಗೂ ಬೇಡಿಕೆ ಅಧಿಕವಾಗಿರುವುದು ಎನ್ನಲಾಗಿದೆ. ಸಾಮಾನ್ಯವಾಗಿ ಮಾಂಸ ಪ್ರಿಯರು ವಾರಕ್ಕೆ 2-3 ಬಾರಿ ಮಟನ್ ಅಥವಾ ಚಿಕನ್ ಸವಿಯಲು ಇಷ್ಟ ಪಡುತ್ತಾರೆ.
ದರ ಹೆಚ್ಚಳಕ್ಕೆ ಕಾರಣವೇನು?
ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆ ಇದ್ದು, ಬೇಡಿಕೆ ದಿಢೀರ್ ಎಂದು ಹೆಚ್ಚಾದ ಕಾರಣ ಮಾಂಸದ ದರ ಭಾರೀ ಹೆಚ್ಚಳವಾಗಿದೆ. ಬೇಸಿಗೆ ಕಾಲದಲ್ಲಿ ಚಿಕನ್‌ಗೆ ಬೇಡಿಕೆ ಕಡಿಮೆಯಾದ ಕಾರಣ ಬೆಲೆ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ಕೋಳಿ ಸಾಕಾಣಿಕೆದಾರರು, ಉದ್ಯಮಿಗಳು ಸಾಕಾಣಿಕೆಯನ್ನು ಕಡಿಮೆ ಮಾಡಿದ್ದರು. ಮೇವಿನ ಕೊರತೆಯಿಂದಾಗಿ ಕುರಿ, ಮೇಕೆ ಸಾಕಾಣಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಆದರೆ, ಈಗ ಮಳೆಗಾಲ ಶುರುವಾಗಿದ್ದು ಚಿಕನ್, ಮಟನ್‌ಗೆ ಭಾರೀ ಬೇಡಿಕೆ ಉಂಟಾಗಿದೆ.

ಮೃಗಶಿರಾ ಮಳೆ ಆರಂಭವಾಗಿದೆ. ಈಗ ಬಹುತೇಕ ಮಾಂಸಾಹಾರಿಗಳು ಬಾಡೂಟ ಸವಿಯುವುದುವಾಡಿಕೆ, ಎರಡು ವಾರಗಳ ಹಿಂದೆ ಪ್ರತಿ ಕೆಜಿಗೆ 150 ರೂನಿಂದ 180ರೂ ವರೆಗೆ ಇದ್ದಿದ್ದು, ಇದೀಗ 250 ರಿಂದ 280 ರೂಗೆ ಏರಿಕೆಯಾಗಿದೆ. 500 ರೂ. ಗಳಿಂದ 600 ರೂ ಇದ್ದ ಮಟನ್ ಬೆಲೆ ಈಗ 700 ರೂನಿಂದ 800 ರೂಗೆ ಏರಿಕೆಯಾಗಿದೆ. ಇನ್ನು 15 ದಿನಗಳ ಹಿಂದೆ ಅಂಗಡಿಗಳಲ್ಲಿ ಒಂದು ಮೊಟ್ಟೆಗೆ 5.5 ರಿಂದ 6 ರೂ. ಇತ್ತು. ಸದ್ಯ 7 ರೂ.ನಿಂದ 8 ರೂಪಾಯಿಗೆ ಏರಿಕೆಯಾಗಿದೆ.
ಮಳೆಗಾಲದಲ್ಲಿ ಬಹುತೇಕರು ಶ್ರಾವಣದವರೆಗೆ ಮಾಂಸಾಹಾರ ಹೆಚ್ಚು ತಿನ್ನುತ್ತಾರೆ. ಇನ್ನು ಬೇಸಿಗೆಯಲ್ಲಿ ಚಿಕನ್ ದರ ನೆಲ ಕಚ್ಚಿತ್ತು. ಇದರಿಂದ ಪೌಲ್ಟ್ರಿ ಉದ್ಯಮಿಗಳು ಹೆಚ್ಚು ಉತ್ಪಾದನೆ ಮಾಡಲಿಲ್ಲ. ಇನ್ನು ಕುರಿ ಸಾಕಾಣಿಕೆ ಕೂಡ ಹೇಳಿಕೊಳ್ಳುವಷ್ಟು ಇಲ್ಲ. ಸದ್ಯ ಮದುವೆ ಸೇರಿ ಹಲವು ಸೀಜನ್‌ಗಳು ಬಂದಿದ್ದರಿಂದ ದಿಢೀರ್ ಬೇಡಿಕೆ ಹೆಚ್ಚಾಗಿ ಬೆಲೆ ಏರಲು ಕಾರಣವಾಗಿದೆ.
ಮೇಕೆ, ಕುರಿಗಳಿಗೆ ಬಂಗಾರದ ಬೆಲೆ
ಬೆಲೆ ಉದ್ಯಮ ಬೇಸಿಗೆಯಲ್ಲಿ ನೆಲಕಚ್ಚಿದ್ದರಿಂದ ರೈತರು ತತ್ತರಿಸಿದರು. ಈಗ 180 ರೂ. ಇದ್ದ ಚಿಕನ್‌ಗೆ ಉತ್ತಮ ಬೆಲೆ ಬಂದಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಇನ್ನು ಈ ಹಿಂದೆ ಕುರಿ ಬೆಲೆ ಕಡಿಮೆಯಾಗಿರಲಿಲ್ಲ. ಆದರೆ ಈ ಹಿಂದಿನ ಬೆಲೆಗಿಂತ ಹೆಚ್ಚಿನ ಬೆಲೆಗೆ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ಕುರಿಗಾಹಿ ರೈತರು ಕೈ ತುಂಬಾ ಹಣ ಬರುತ್ತಿದೆ ಎನ್ನುತ್ತಾರೆ.
ಕುರಿ, ಮೇಕೆ ಸಾಕುವುದು ಎಷ್ಟು ಕಷ್ಟವೋ ಮಾರಾಟ ಮಾಡುವುದು ಕೂಡ ಅಷ್ಟೇ ಕಷ್ಟ. ಕುರಿ ಸಾಕಣೆ ಮಾಡುವ ರೈತರು ಕುರಿ ಉದ್ಯಮದಿಂದ ನಿಧಾನವಾಗಿ ಹಿಂದಕ್ಕೆ ಸರಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ, ಚಿಂತಾಮಣಿ ಮಾರುಕಟ್ಟೆ ಸೇರಿ ಇತರೆ ಕುರಿ ಮಾರುಕಟ್ಟೆಯಲ್ಲಿ ಹೋದರೆ ಈ ಹಿಂದೆ 8 ಸಾವಿರ ರೂನಿಂದ 12 ಸಾವಿರ ರೂಗೆ ಸಾಮಾನ್ಯ ಕುರಿ ಬಂದರೆ, ಸಾಕಿದ ಟಗರು 20 ಸಾವಿರದಿಂದ 25 ಸಾವಿರ ರೂಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಕುರಿಯೊಂದಕ್ಕೆ 20 ಸಾವಿರ ರೂ ಹೆಚ್ಚಾದರೆ, ಟಗರು 30 ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.
ಗ್ರಾಹಕರ ನಿರೀಕ್ಷೆ ಎನು?
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚಿಕನ್ ಪೂರೈಕೆ ಆಗದಿರಿವುದು, ಮತ್ತೊಂದು ಕಡೆ ಕೋಳಿ ಸಾಕಾಣಿಕೆಗೆ ಬೇಕಾದ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣ ಮಾಡಿದರೆ, ಇಳಿಮುಖವಾಗಿ ದರ ಕಡಿಮೆಯಾಗುತ್ತದೆ. ಕೆಲವೊಮ್ಮೆ ದರ ಇಳಿದರೂ ಸಹ ಸ್ಥಳೀಯ ಅಂಗಡಿ ಮಾಲೀಕರು ಪರಿಸ್ಥಿತಿಯ ಲಾಭ ಬಳಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಇದಕ್ಕೆ ಕಡಿವಾಣ ಬೀಳಲಿ ಎಂದು ಗ್ರಾಹಕರು ಬೇಡಿಕೆ ಇಟ್ಟಿದ್ದಾರೆ.
'ಪೌಲ್ಟ್ರಿ ಪಾರಂಗಳಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿದ್ದರ ಪರಿಣಾಮ ಮೊಟ್ಟೆಗಳ ಬೆಲೆಯೂ ಹೆಚ್ಚಾಗಿದೆ. ಮಟನ್, ಚಿಕನ್ ಬೆಲೆ ಹೆಚ್ಚಾಗಿದ್ದರಿಂದ ಕೆಲವರು ಮೊಟ್ಟೆ ಮೊರೆ ಹೋಗಿದ್ದರಿಂದಲೂ ಇದರ ಬೆಲೆ ಹೆಚ್ಚಾಗಿದೆ. ಒಂದು ಮೊಟ್ಟೆ 8 ರೂಪಾಯಿಗೆ ಮಾರುತ್ತಿದ್ದೇವೆ' ಎಂದು ಚಿಕ್ಕತಮ್ಮನಹಳ್ಳಿ ವ್ಯಾಪಾರಸ್ಥ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications