ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ ಹಾಲಿ ಬಿಜೆಪಿ ಸಂಸದ
ಚಿಕ್ಕಬಳ್ಳಾಪುರ, ಆಗಸ್ಟ್ 23: ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಬಿ.ಎನ್. ಬಚ್ಚೇಗೌಡ ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಚಾಕಚಕ್ಯತೆಯಿಂದ ಜಾರಿಗೆ ತಂದಿದ್ದಾರೆ.ಸಿದ್ದರಾಮಯ್ಯ ಅವರಿಗೆ ಇವೆಲ್ಲಾ ಜಾರಿಗೆ ತರುವಂಥಹ ಬುದ್ಧಿವಂತಿಕೆ ಇದೆ. ಸಿದ್ದರಾಮಯ್ಯ ಬಹಳ ಸಾರಿ ಚುನಾಯಿತರಾಗಿದ್ದಾರೆ. ಸಿದ್ದರಾಮಯ್ಯ ಬಹಳ ವರ್ಷವಿತ್ತ ಸಚಿವರಾಗಿರುವ ಅನುಭವ ಇದೆ. ರಾಮಕೃಷ್ಣ ಹೆಗಡೆ ಬಿಟ್ಟರೆ ಸಿದ್ದರಾಮಯ್ಯನವರೇ ಮೊದಲು ಎಂದರು.

ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಮೂರು ತಿಂಗಳ ಹತ್ತತ್ರ ನಾಲ್ಕನೇ ತಿಂಗಳಾಗ್ತಾ ಇದೆ, ಬಿಜೆಪಿ ಪ್ರತಿ ಪಕ್ಷದ ನಾಯಕನನ್ನು ಮಾಡಲು ಆಗಲಿಲ್ಲ. ಬಿಜೆಪಿ ಸೆಟ್ ಬ್ಯಾಕ್ ಆಗಿದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಬಾಂಬೇ ಬಾಯ್ಸ್ ಬಿಜೆಪಿಯಲ್ಲಿ ಇರೋದಕ್ಕೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಿಲ್ಲ. ಎಸ್ ಟಿ ಸೋಮಶೇಖರ್, ಹೆಬ್ಬಾರ್ ಇನ್ನೂ ಜೆಡಿಎಸ್ ನವರು ಬಿಜೆಪಿಯವರು ಕಾಂಗ್ರೆಸ್‌ಗೆ ಬರುತ್ತಾರೆ ಎಂದರು.
ತಮಿಳುನಾಡಿಗೆ ನೀರು ಬಿಡಲು ನನ್ನ ವಿರೋಧ ಇದೆ
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮಾತನಾಡಿದ ಅವರು, ನನ್ನ ಪ್ರಕಾರ ತಮಿಳುನಾಡಿಗೆ ನೀರು ಬಿಡುವುದು ತಪ್ಪು. ಸದ್ಯ ನೀರಿಲ್ಲದೆ ನಮಗೆ ತೊಂದರೆ ಆಗುತ್ತಿದೆ. ಕಾವೇರಿ ನೀರು ಬಿಡಲು ನನ್ನ ವಿರೋಧ ಇದೆ. ಸಿಎಂ ಸಿದ್ದರಾಮಯ್ಯ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಒಳ್ಳೆಯ ಬೆಳವಣಿಗೆಗೆ ಒಳ್ಳೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಾವೇರಿ ಮಂಡ್ಯಗೆ ಮಾತ್ರ ಸೀಮಿತವಾಗಿಲ್ಲ ಇಡೀ ಕರ್ನಾಟಕಕ್ಕೆ ಬೇಕಾಗಿರುವುದು ಎಂದು ಹೇಳಿದರು.
ಇಂಡಿಯಾ ಪಾರ್ಟಿ ಆದ ಮೇಲೆ ನೀರು ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಈ ಬಾರಿ ನಮಗೆ ಮಳೆ ಆಗಿಲ್ಲ. ಕರಾವಳಿಯಲ್ಲಿ ಶಿವಮೊಗ್ಗದಲ್ಲಿ ಮಳೆ ಇಲ್ಲ. ನೀರಿಲ್ಲದೆ ಬಹಳ ತೊಂದರೆಯಲ್ಲಿ ಇದ್ದೇವೆ. ರಾಗಿ ಸೇರಿದಂತೆ ಕೃಷಿ ಬೆಳೆಗಳು ಒಣಗುತ್ತಿವೆ. ಕರ್ನಾಟಕವನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ಕೇಂದ್ರ ಸರ್ಕಾದ ರಾಜ್ಯ ಸರ್ಕಾರ ಎರಡು ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಅಕ್ಕಿ ಕೊಡದೆ ತಪ್ಪು ಮಾಡಿದೆ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕರ್ನಾಟಕಕ್ಕೆ ಅಕ್ಕಿ ಕೊಡದೆ ಇರುವುದು ತಪ್ಪು. ಬಿಜೆಪಿ ಸಂಸದನಾಗಿ ನಾನು ಹೇಳುತ್ತೇನೆ. ಕೇಂದ್ರ ಅಕ್ಕಿ ಕೊಡದೆ ಕರ್ನಾಟಕ್ಕೆ ಅನ್ಯಾಯ ಮಾಡಿದ್ದಾರೆ ಎಂದ ಅವರು, 2024ಕ್ಕೆ ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ. ಇಂಡಿಯಾ ವರ್ಸಸ್ ಬಿಜೆಪಿ ಎರಡು ಪಕ್ಷಗಳಿವೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಾರೋ, ಬೇರೆ ಯಾರು ಅಧಿಕಾರಕ್ಕೆ ಬರುತ್ತಾರೋ. ಇಂದೇ ಹೇಳಲು ಆಗುವುದಿಲ್ಲ ಎಂದು ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲ, ರಾಜ್ಯದಲ್ಲಿ ಜೆಡಿಎಸ್ ಉಳಿವು
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲ. ನಾನು ಹೇಳುತ್ತೇನೆ..ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲ. ಅವರಪ್ಪ ಇರುವವರೆಗೂ ಬಿಜೆಪಿ ಸೇರಲ್ಲ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ. ಒಂದು ಪ್ರಾದೇಶಿಕ ಪಕ್ಷ ಇದೆ. ಜೆಡಿಎಸ್ ರಾಜ್ಯದಲ್ಲಿ ಉಳಿದುಕೊಳ್ಳುತ್ತದೆ. ದೇವೇಗೌಡರು ಇರುವ ವರೆಗೂ ಪಕ್ಷ ಉಳಿಯುತ್ತದೆ. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಆಗೋದು ಪಕ್ಕಾ ಎಂದರು.












Click it and Unblock the Notifications