ಜಯಾ ಬೆಂಬಲಿಸಿ ಶಾಲಾಕಾಲೇಜು ರಜಾ ಯಾಕೆ?
ಚೆನ್ನೈ, ಅ. 6 : ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಕರ್ನಾಟಕದಲ್ಲಿ ನಡೆಯುತ್ತಿದ್ದರೆ ತಮಿಳುನಾಡಿನಲ್ಲೇಕೆ ಶಾಲಾಕಾಲೇಜಿಗೆ ರಜಾ ನೀಡಬೇಕು ಎಂದು ರಾಜಕೀಯ ಪಕ್ಷಗಳು, ಶಿಕ್ಷಣತಜ್ಞರು, ಪೋಷಕರು, ಜನಪರ ಸಂಘಟನೆಗಳು ಹುಯಿಲೆಬ್ಬಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನೀಡಲಾಗಿದ್ದ ರಜಾ ಘೋಷಣೆಯನ್ನು ತಮಿಳುನಾಡಿನಲ್ಲಿ ಹಿಂತೆಗೆದುಕೊಳ್ಳಲಾಗಿದೆ.
ಜಯಲಲಿತಾರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತಮಿಳುನಾಡಿನ ಖಾಸಗಿ ಶಾಲೆಗಳ ಒಕ್ಕೂಟ ಶಾಲೆಗಳಿಗೆ ರಜಾ ಘೋಷಿಸಿತ್ತು. ಒಟ್ಟು 4500 ಖಾಸಗಿ ಶಾಲೆಗಳು ಮತ್ತು 170 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶಾಲಾಕಾಲೇಜುಗಳಿಗೆ ರಜಾ ನೀಡಿ ಪ್ರತಿಭಟನೆಯಲ್ಲಿ ತೊಡಗಲು ಚಿಂತನೆ ನಡೆಸಿದ್ದವು.
ಇಂಥದೊಂದು ಸುತ್ತೋಲೆ ಹೊರಬೀಳುತ್ತಿದ್ದಂತೆ ಎಐಎಡಿಎಂಕೆ ಪಕ್ಷದ ವಿರೋಧಿಗಳಾದ ಡಿಎಂಕೆ ಮತ್ತಿತರ ಪಕ್ಷದ ನಾಯಕರು ಸಭೆ ಸೇರಿ, ಶಾಲಾಕಾಲೇಜು ರಜಾ ಘೋಷಣೆಯ ಸಂಗತಿಯನ್ನು ಪ್ರತಿಭಟಿಸಿದ್ದಾರೆ. ಹಾಗೆಯೆ, ರಾಜಕೀಯ ಪ್ರೇರಿತ ಪ್ರತಿಭಟನೆಗೆ ಮಕ್ಕಳನ್ನೇಕೆ ಎಳೆತರಬೇಕು ಎಂದು ಪೋಷಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಜೊತೆಗೆ, ಬಾಬು ಎಂಬ ವಕೀಲರೊಬ್ಬರು, ಖಾಸಗಿ ಶಾಲೆ ಕಾಲೇಜುಗಳ ಶಿಕ್ಷಕರ ರಜಾ ಹುನ್ನಾರವನ್ನು ವಿರೋಧಿಸಿ ಮದ್ರಾಸ್ ಹೈಕೋರ್ಟಿನಲ್ಲಿ ರಿಟ್ ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆಗೆ ಬರುವ ಮೊದಲೇ ಎಚ್ಚೆತ್ತುಕೊಂಡ ಖಾಸಗಿ ಶಾಲೆಗಳ ಒಕ್ಕೂಟ ರಜಾ ಘೋಷಣೆಯ ಸುತ್ತೋಲೆಯನ್ನು ಹಿಂತೆಗೆದುಕೊಂಡಿದೆ. [ಹುಚ್ಚುತನದ ಪರಮಾವಧಿ]
ಜಯಲಲಿತಾ ಬೆಂಬಲಿಗರ ಹುಚ್ಚುಚ್ಚು ವರ್ತನೆಗಳು ತೀವ್ರ ಟೀಕೆಗೆ ಗುರಿಯಾಗುತ್ತಿವೆ. ಜಯಾ ಜೈಲು ಸೇರಿದ ಸಂದರ್ಭದಲ್ಲಿ ಹದಿನೈದಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾದ ದಿನ ಇಡೀ ಸಂಪುಟವೇ ಗಳಗಳನೆ ಅತ್ತುಕರೆದಿತ್ತು. ಇಂದು ಸೋಮವಾರ ಜಯಾ ಬೆಂಬಲಿಗರು ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಏನೆನ್ನಬೇಕು ಇಂಥವರಿಗೆ?
ಜಯಲಲಿತಾ ಅವರು 66.65 ಕೋಟಿ ರು. ಅಕ್ರಮ ಆಸ್ತಿ ಗಳಿಸಿದ ಅಪರಾಧ ಸಾಬೀತಾದ ಕಾರಣ ಸೆ.27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ ಮತ್ತು ಮೂವರು ಸಹಚರರಿಗೆ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಕರ್ನಾಟಕ ಹೈಕೋರ್ಟಿಗೆ ಜಯಾ ಅವರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಅ.7, ಮಂಗಳವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಪರಪ್ಪನ ಅಗ್ರಹಾರ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.












Click it and Unblock the Notifications