ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೊವಿಡ್ 19 ಸೋಂಕು ಮುಕ್ತ
ಚೆನ್ನೈ, ಆ. 24: ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕೊವಿಡ್ 19 ವರದಿ ನೆಗಟಿವ್ ಎಂದು ಬಂದಿದೆ. ಇಲ್ಲಿನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್ಪಿಬಿ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
Recommended Video
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟ ತೊಂದರೆಯಾಗಿದ್ದರಿಂದ ಎಸ್‌ಪಿಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೊವಿಡ್ 19 ಲಕ್ಷಣಗಳಿರುವುದು ದೃಢಪಟ್ಟಿತ್ತು.
ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

16ಕ್ಕೂ ಅಧಿಕ ಭಾಷೆಯಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಡಿಯೋ ಸಂದೇಶ ನೀಡಿ, ಕೋವಿಡ್ 19 ಸೋಂಕಿನ ಸಣ್ಣ ಪ್ರಮಾಣದ ಲಕ್ಷಣ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದರು.

ಇದಾದ ಬಳಿಕ ಅವರ ಶ್ವಾಸಕೋಶದ ಸೋಂಕು ಉಲ್ಬಣಿಸಿ, ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿತ್ತು. ಆದರೆ, ಆಪಾರ ಸಂಖ್ಯೆಯ ಅಭಿಮಾನಿಗಳ ಪ್ರಾರ್ಥನೆಯ ಬಲ ಎಂಬಂತೆ ಕಳೆದ ಎರಡು ದಿನಗಳಿಂದ ಎಸ್ಪಿಬಿ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದು, ಕೊವಿಡ್ 19 ಕೂಡಾ ನೆಗಟಿವ್ ಎಂದು ಬಂದಿದೆ ಎಂದು ಪುತ್ರ ಎಸ್ಬಿ ಚರಣ್ ಹೇಳಿದ್ದಾರೆ.












Click it and Unblock the Notifications