ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?
Recommended Video

ಚೆನ್ನೈ, ಡಿಸೆಂಬರ್ 18: ಐದು ರಾಜ್ಯಗಳ ಚುನಾವಣೆ ಮುಗೀತು, ಫಲಿತಾಂಶವೂ ಬಂತು, ಹೊಸ ಸರ್ಕಾರವೂ ಆಯ್ತು... ಇನ್ನು ಮುಂದೇನಿದ್ದರೂ ಲೋಕಸಭಾ ಚುನಾವಣೆಯ ಸದ್ದು. ಅದರಲ್ಲೂ ಸಂಭಾವ್ಯ ಮಹಾಘಟಬಂಧನ ಈಗಾಗಲೇ ಸುದ್ದಿ ಮಾಡುತ್ತಿದೆ.
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಸದ್ಯದ ಯಕ್ಷಪ್ರಶ್ನೆ. ಇತ್ತೀಚೆಗಷ್ಟೇ ತಮಿಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಹೇಳಿಕೆ ನೀಡಿದ್ದರು.
ಆದರೆ ಅವರ ಈ ಹೇಳಿಕೆ ಮೈತ್ರಿಕೂಟದ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು .ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಘಟಾನುಘಟಿಗಳೆಲ್ಲ ಸ್ಟಾಲಿನ್ ಮಾತನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ಆದರೆ, ಸ್ಟಾಲಿನ್ ಮಾತ್ರ ತಮ್ಮ ಮಾತನ್ನು ಪುನರುಚ್ಚರಿಸಿದ್ದಲ್ಲದೆ, ರಾಹುಲ್ ಗಾಂಧಿಯವರೇ ಏಕೆ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

ಸೆಕ್ಯುಲರ್ ಶಕ್ತಿಯನ್ನು ರಾಹುಲ್ ಒಂದಾಗಿಸಬಲ್ಲರು
"ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಎಲ್ಲಾ ಸೆಕ್ಯುಲರ್ ಶಕ್ತಿಗಳನ್ನೂ ಒಂದುಗೂಡಿಸುವ ಶಕ್ತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿದೆ. ಅವರೊಬ್ಬ ಪ್ರಬುದ್ಧ ನಾಯಕರಾಗಿ ಬೆಳೆದಿದ್ದಾರೆ" ಎಂದು ಸ್ಟಾಲಿನ್ ಹೇಳಿದ್ದಾರೆ.

ಮೂರು ರಾಜ್ಯ ಗೆಲ್ಲಿಸಿದ ಕೀರ್ತಿ ರಾಹುಲ್ ಅವರಿಗೆ!
ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಬಹುಮುಖ್ಯ ಕಾರಣ ರಾಹುಲ್ ಗಾಂಧಿ ಎಂಬುದನ್ನು ಒಪ್ಪಲೇಬೇಕು. ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಜಯಗಳಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ರಾಹುಲ್ ಗಾಂಧಿ ಅದನ್ನು ಸಾಧಿಸಿ ತೋರಿಸಿದರು ಎಂದು ಸ್ಟಾಲಿನ್ ಹಾಡಿ ಹೊಗಳಿದ್ದಾರೆ.

ಉತ್ತಮ ನಾಯಕತ್ವ ಬೇಕು
'ನಮಗೆ ಒಂದು ಉತ್ತಮ ನಾಯಕತ್ವ ಬೇಕು. ಅದಕ್ಕೆಂದೇ ನಾನು ರಾಹುಲ್ ಗಾಂಧಿ ಅವರ ಹೆಸರನ್ನು ಹೇಳಿದ್ದೇನೆ. ಈ ದೇಶವನ್ನು ಕೋಮು ಸೌಹಾರ್ದ ನಾಡನ್ನಾಗಿ ಮಾಡಲು ಮತ್ತು ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ರಾಹುಲ್ ಗಾಂಧಿ ಅವರಿಗೆ ಸಾಧ್ಯ ಎಂಬುದು ನನ್ನ ಭಾವನೆ'- ಎಂಕೆ ಸ್ಟಾಲಿನ್

ಸ್ಟಾಲಿನ್ ಮಾತಿಗೆ ಮುನಿಸಿಕೊಂಡವರು!
ಎಂಕೆ ಸ್ಟಾಲಿನ್ ಅವರ ಮಾತನ್ನು ತೃಣಮೂಲ ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ ಮೈತ್ರಿಕೂಟದ ಹಲವು ಪಕ್ಷಗಳು ವಿರೋಧಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಟಿಎಂ ಸಿ ಮುಖಂಡರೊಬ್ಬರು, 'ಇದೊಂದು ಅಪ್ರಬುದ್ಧ ಹೇಳಿಕೆ. ಇದು ವಿರೋಧ ಪಕ್ಷಗಳ ನಡುವಿನ ಒಗ್ಗಟ್ಟನ್ನು ಮುರಿಯುವಂಥ ಹೇಳಿಕೆ. ಯಾರು ಪ್ರಧಾನಿಯಾಗಬೇಕು ಎಂಬುದನ್ನು ಲೋಕಸಭಾ ಚುನಾವಣೆಯ ನಂತರ ನಿರ್ಧರಿಸಲಾಗುವುದು ಎಂದು ಈ ಮೊದಲೇ ನಿರ್ಧರಿಸಲಾಗಿದೆ. ಹೀಗಿರುವಾಗ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಈಗಲೇ ಮಾತನಾಡುವುದು ಅಪ್ರಬುದ್ಧ ಹೇಳಿಕೆಯಾಗುತ್ತದೆ' ಎಂದಿದ್ದಾರೆ.












Click it and Unblock the Notifications