ಡಿಎಂಕೆ ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಅವಿರೋಧ ಆಯ್ಕೆ
ಚೆನ್ನೈ, ಆಗಸ್ಟ್ 28: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ನಿಧನದ ನಂತರ ತೆರವಾಗಿದ್ದ ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪುರ್ರ ಎಂಕೆ ಸ್ಟಾಲಿನ್ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚೆನ್ನೈಯಲ್ಲಿರುವ ದ್ರಾವಿಡ ಮುನ್ನೆಟ್ರ ಕಳಗಂ(ಡಿಎಂಕೆ) ಪಕ್ಷದ ಕೇಂದ್ರ ಕಚೇರಿಯಲ್ಲಿ ಎಂಕೆ ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರೆ, ದುರೈ ಮುರುಗನ್ ಅವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು.
65 ವರ್ಷ ವಯಸ್ಸಿನ ಸ್ಟಾಲಿನ್ ಇಷ್ಟು ದಿನ ಡಿಎಂಕೆ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪಕ್ಷಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎಂಕೆ ಸ್ಟಾಲಿನ್ ಅವರ ಸಹೋದರ ಎಂಕೆ ಅಳಗಿರಿ ಅವರ ಬೆದರಿಕೆಗೆ ಬಗ್ಗದ ಸ್ಟಾಲಿನ್ ಬೆಂಬಲಿಗರು ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಿದರು. ಡಿಎಂಕೆಯಲ್ಲಿ ಆಯಕಟ್ಟಿನ ಹುದ್ದೆ ಪಡೆಯುವ ಸಲುವಾಗಿ ಅಳಗಿರಿ ಮತ್ತು ಸ್ಟಾಲಿನ್ ನಡುವೆ ಹಲವು ವರ್ಷಗಳಿಂದಲೂ ಮನಸ್ತಾಪವಿದ್ದೇ ಇದೆ.
ಆದರೆ ಕರುಣಾನಿಧಿ ಅವರು ಬದುಕಿರುವವರೆಗೂ ಬೂದಿಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಅವರ ಮರಣಾನಂತರ ಮತ್ತೆ ಹೊಗೆಯಾಡುವುದಕ್ಕೆ ಶುರುಮಾಡಿದೆ. ಎಂ ಕರುಣಾನಿಧಿ ಅವರು ಬರೋಬ್ಬರಿ 49 ವರ್ಷಗಳಷ್ಟು ದೀರ್ಘಕಾಲ ಡಿಎಂಕೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.












Click it and Unblock the Notifications